ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ: ಈ ವರೆಗಿನ ಫಲಿತಾಂಶ, ಗೆದಿದ್ದು ಯಾರು, ಮಕಾಡೆ ಮಲಗಿದ್ದು ಯಾರು?

ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟವಾಗುತ್ತಿದ್ದು, ಹೊಳೆ ನರಸೀಪುರ ಪುರಸಭೆಯನ್ನು ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟವಾಗುತ್ತಿದ್ದು, ಹೊಳೆ ನರಸೀಪುರ ಪುರಸಭೆಯನ್ನು ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿದೆ.
ಇಂಧನ ಸಚಿವ ರೇವಣ್ಣ ಅವರ ಸ್ವಕ್ಷೇತ್ರದ‌ ಹೊಳೆನರಸೀಪುರ ಪುರಸಭೆಯನ್ನು ನಿರೀಕ್ಷೆಗೂ ಮೀರಿ ಜೆಡಿಎಸ್ ಪಕ್ಷ ಕ್ಲೀನ್ ಸ್ವೀಪ್ ಮಾಡಿದ್ದು, ಒಟ್ಟು 23 ಸ್ಥಾನಗಳ ಪೈಕಿ 23 ಸ್ಥಾನಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಇನ್ನು ಕಳೆದ ಬಾರಿ 5 ಸ್ಥಾನ ಹೊಂದಿದ್ದ ಕಾಂಗ್ರೆಸ್ ಪಕ್ಷ ಈಗ ಶೂನ್ಯ ಸಾಧನೆಗೈದಿದೆ. ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಳೆ ನರಸೀಪುರದಲ್ಲಿ ಜೆಡಿಎಸ್ ಉಸ್ತುವಾರಿ ಹೊತ್ತಿದ್ದ ಭವಾನಿ ರೇವಣ್ಣ ಅವರ ಕೈ ಮತ್ತಷ್ಟು ಪ್ರಬಲವಾಗಿದ್ದು, ಜಿಲ್ಲೆಯ 5ರಲ್ಲಿ 4 ಕಡೆ ಜೆಡಿಎಸ್ ಜಯಭೇರಿ ಬಾರಿಸಿದೆ.
ಇನ್ನು ಮೈಸೂರು ಪಾಲಿಕೆ ಹಾಲಿ ಮೇಯರ್‌ ಭಾಗ್ಯವತಿ ಅವರು ಅನಿರೀಕ್ಷಿತವಾಗಿ ಸೋಲು ಕಂಡಿದ್ದು, ವಾರ್ಡ್ ನಂಬರ್ 21ರಲ್ಲಿ ಬಿಜೆಪಿಯ ವೇದಾವತಿ ಭರ್ಜರಿ ಗೆಲುವು ಸಾಧಿಸಿದ್ದಾರೆ. 
ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆ ಬಿಜೆಪಿ ತೆಕ್ಕೆಗೆ ಜಾರಿದ್ದು, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಮತ್ತೆ ಮುಖಭಂಗ ಅನುಭವಿಸಿದ್ದಾರೆ. ಒಟ್ಟು 23 ವಾರ್ಡ್‌ಗಳ ಪೈಕಿ ಬಿಜೆಪಿ 12ರಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 9 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. ಲಿಂಗಸುಗೂರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಹೋಗಿದ್ದು, ಒಟ್ಟು  23 ವಾರ್ಡ್ ಗಳ ಪೈಕಿ ಕಾಂಗ್ರೆಸ್ 13 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. ಜೆಡಿಎಸ್ 4 ವಾರ್ಡ್ ಗಳಲ್ಲಿ ಜಯ ಸಾಧಿಸಿದ್ದು, ಬಿಜೆಪಿ ಗೆಲುವು 2 ವಾರ್ಡ್ ಗೆ ಮಾತ್ರ ಸೀಮಿತವಾಗಿದೆ. ಇನ್ನು ನಾಲ್ಕು ಮಂದಿ ಪಕ್ಷೇತರರು ಇಲ್ಲಿ ಗೆಲುವು ಸಾಧಿಸಿದ್ದಾರೆ.
ಮತ್ತೊಂದೆಡೆ ಕೊರಟಗೆರೆಯಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ತೀವ್ರ ಮುಖಭಂಗ ಅನುಭವಿಸಿದ್ದು, ಪಟ್ಟಣ ಪಂಚಾಯತ್ ಜೆಡಿಎಸ್ ತೆಕ್ಕೆಗೆ ಜಾರಿದೆ.  ಒಟ್ಟು 15 ವಾರ್ಡ್ ಗಳ ಪೈಕಿ ಜೆಡಿಎಸ್ 8ರಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 5 ಮತ್ತು ಬಿಜೆಪಿ 1 ವಾರ್ಡ್ ನಲ್ಲಿ ಜಯ ಸಾಧಿಸಿದೆ. ಒಂದು ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸಿಂಧನೂರು ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ರಚನೆಗೆ ಸಿದ್ಧವಾಗಿದ್ದು, ಒಟ್ಟು 31 ವಾರ್ಡ್ ಗಳ ಪೈಕಿ ಕಾಂಗ್ರೆಸ್ 20 ವಾರ್ಡ್ ಗಳಲ್ಲಿ ಜಯ ಭೇರಿ ಬಾರಿಸಿದೆ. ಜೆಡಿಎಸ್ 11 ವಾರ್ಡ್ ಗಳಲ್ಲಿ ಜಯ ಸಾಧಿಸಿದ್ದು, ಬಿಜೆಪಿ ಶೂನ್ಯ ಸಾಧನೆಗೈದಿದೆ. 
ಇನ್ನು ಉಳ್ಳಾಲ ನಗರ ಸಭೆ ಅತಂತ್ರವಾಗಿದ್ದು. ಇಲ್ಲಿನ ಒಟ್ಟು 26 ವಾರ್ಡ್ ಗಳ ಪೈಕಿ ಕಾಂಗ್ರೆಸ್, 11, ಎಡಿಪಿಐ 6, ಜಿಡಿಎಸ್ 4, ಬಿಜೆಪಿ 3 ಮತ್ತು ಐಎನ್ ಡಿ 2 ವಾರ್ಡ್ ಗಳಲ್ಲಿಜಯ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಮೈತ್ರಿ ಮಾಡಿಕೊಳ್ಳುನ ಸಾಧ್ಯತೆ ದಟ್ಟವಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪುರಸಭೆ ಬಿಜೆಪಿಯ ತೆಕ್ಕೆಗೆ ಜಾರಿದ್ದು, ಇಲ್ಲಿನ ಒಟ್ಟು 13 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ. ಅಲ್ಲದೆ ಬಿಜೆಪಿ ಮ್ಯಾಜಿಕ್ ನಂಬರ್ ತಲುಪಿದ್ದು ಅಧಿಕಾರ ರಚನೆಗೆ ಮುಂದಾಗಿದೆ. ಗಜೇಂದ್ರಗಡ ಪುರಸಭೆ ಬಿಜೆಪಿ ಪಾಲಾಗಿದ್ದು, ಒಟ್ಟು 23 ವಾರ್ಡ್ ಗಳ ಪೈಕಿ ಬಿಜೆಪಿ-18ರಲ್ಲಿ ಮತ್ತು ಕಾಂಗ್ರೆಸ್ 5 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.
ಮುದಗಲ್ ಪುರಸಭೆ ಕಾಂಗ್ರೆಸ್ ಪಾಲಾಗಿದ್ದು. ಒಟ್ಟು 23 ವಾರ್ಡ್ ಗಳ ಪೈಕಿ ಕಾಂಗ್ರೆಸ್- 15, ಬಿಜೆಪಿ- 1 ಮತ್ತು ಜೆಡಿಎಸ್- 7 ವಾರ್ಡ್ ಗಳಲ್ಲಿ ಜಯ ಗಳಿಸಿದೆ. ಗದಗ ಜಿಲ್ಲೆಯ ರೋಣ ಪುರಸಭೆ ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿ ಶಾಸಕ ಕಳಕಪ್ಪ ಬಂಡಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಇಲ್ಲಿನ ಒಟ್ಟು 23 ವಾರ್ಡ್ ಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 7 ವಾರ್ಡ್ ಗಳಲ್ಲಿ ಜಯಗಳಿಸಿದೆ. ಒಂದು ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. ಇತ್ತ ಮಂಗಳೂರು ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯೂ ಮೈತ್ರಿಯ ಹೊರತಾಗಿ ಯಾವುದೇ ಪಕ್ಷ ಅಧಿಕಾರ ರಚನೆ ಸಾಧ್ಯವಿಲ್ಲ ಎಂಬಂತಾಗಿದೆ. ಇಲ್ಲಿನ ಒಟ್ಟು 27 ವಾರ್ಡ್ ಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 11, ಎಸ್ ಡಿಪಿಐ 4 ವಾರ್ಡ್ ಗಳಲ್ಲಿ ಜಯ ಗಳಿಸಿದೆ.  ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಸೋಲು ನಕಾರಾತ್ಮಕ ಪರಿಣಾಮ ಇಲ್ಲಿನ ನಗರಸಭೆಯ ಮೇಲೂ ಬೀರಿದಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com