'ಒಂದೇ ದಿನ ನಾಲ್ವರು ಅಧರ್ಮೀಯರ ವಿನಾಶ'; ಅಮೋಲ್​ ಕಾಳೆ ಡೈರಿಯಲ್ಲಿತ್ತು ದೊಡ್ಡ ಸಂಚು

ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಲಭಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಲಭಿಸುತ್ತಿದೆ.
ಅದರಂತೆ ಗೌರಿ ಲಂಕೇಶ್ ರನ್ನು ಹತ್ಯೆಗೈದ ಹಂತಕರೇ ಒಂದೇ ದಿನ ನಾಲ್ಕು ಮಂದಿ ವಿಚಾರವಾದಿಗಳ ಹತ್ಯೆಗೂ ಭಾರಿ ಸಂಚು ರೂಪಿಸಿದ್ದರು ಎಂಬ ಅಂಶ ಇದೀಗ ಎಸ್ ಐಟಿಗೆ ಲಭಿಸಿರುವ ಸಾಕ್ಷ್ಯಾಧಾರಗಳಿಂದ ಬಯಲಾಗಿದೆ. ಈ ಬಗ್ಗೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಡೈರಿಯಲ್ಲಿ ಒಂದೇ ದಿನ ನಾಲ್ಕು ಮಂದಿ ವಿಚಾರವಾದಿಗಳ ಹತ್ಯೆಗೈಯ್ಯಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. 
'ಏಕೀ ದಿವಸ್ ಚಾರ್ ಅಧರ್ಮಿಯೋಂಕಾ ವಿನಾಶ್​' (ಒಂದೇ ದಿನ ನಾಲ್ವರು ಅಧರ್ಮೀಯರ ವಿನಾಶ) ಎಂಬ ಹೆಸರಿನಲ್ಲಿ ನಾಲ್ವರು ವಿಚಾರವಾದಿಗಳ ಹತ್ಯೆ ನಡೆಸಲು ಗೌರಿ ಹತ್ಯೆಯ ಆರೋಪಿ ಅಮೋಲ್ ಕಾಳೆ ಮತ್ತು ಆತನ ತಂಡ ಸಂಚು ರೂಪಿಸಿತ್ತು. ಗೌರಿ ಹತ್ಯೆ ನಡೆಸಿದ ನಂತರ ಆ ನಾಲ್ವರನ್ನು ಕೊಲ್ಲಲು ಹಂತಕರು ಹೊಂಚು ಹಾಕಿದ್ದರು. ಆದರೆ ಈ ಡೈರಿ ಪೊಲೀಸರ ಕೈ ಸೇರುತ್ತಿದ್ದಂತೆಯೇ ಹಂತಕರ್ ಅಲರ್ಟ್ ಆಗಿದ್ದರು. 
ಡೈರಿಯಲ್ಲಿ ಹತ್ಯೆಯ ಮಾಹಿತಿಯಿದೆಯೇ ಹೊರತು ದಿನಾಂಕವನ್ನು ನಿಗದಿ ಮಾಡಿರಲಿಲ್ಲ. ಯಾವಾಗ ಡೈರಿಯಲ್ಲಿದ್ದ ಚೀಟಿಗಳು ಯಾವಾಗ ಪೊಲೀಸರ ಕೈ ಸೇರಿತೋ ಆಗ ಹಂತಕರು ಅಲರ್ಟ್​ ಆಗಿದ್ದರು. ಹತ್ಯೆಯ ಸಂಚಿನ ವಿಷಯ ತಿಳಿಯುತ್ತಿದ್ದಂತೆಯೇ ನಾಲ್ವರು ವಿಚಾರವಾದಿಗಳ ಮನೆಗೆ ಎಸ್​ಐಟಿ ಅಧಿಕಾರಿಗಳು ಹೆಚ್ಚಿನ ಭದ್ರತೆ ಒದಗಿಸಿ, ನಿಗಾ ವಹಿಸಿದ್ದಾರೆ.
ಇಷ್ಟಕ್ಕೂ ಯಾರು ಆ ನಾಲ್ವರು?
ಗೌರಿ ಲಂಕೇಶ್​ ನಂತರ ಹಂತಕರ ಟಾರ್ಗೆಟ್​ ಆಗಿದ್ದ ಸಾಹಿತಿ ಗಿರೀಶ್ ಕಾರ್ನಾಡ್, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ , ಚಿಂತಕ ಕೆ.ಎಸ್​. ಭಗವಾನ್ ಮತ್ತು ನರೇಂದ್ರ ನಾಯಕ್​ ಅವರನ್ನು ಒಂದೇ ದಿನ ಕೊಲ್ಲಲು ಸಂಚು ರೂಪಿಸಲಾಗಿತ್ತು ಎನ್ನಲಾಗುತ್ತಿದೆ. ಡೈರಿಯಲ್ಲಿ ಬರೆದಿದ್ದ ಅವರ ಹೆಸರುಗಳ ಮುಂದೆ ಆರೋಪಿಗಳು ಕೋಡ್ ವರ್ಡ್​ಗಳನ್ನು ಬರೆದಿದ್ದರು ಎನ್ನಲಾಗಿದೆ.  ನಾಲ್ವರು ವಿಚಾರವಾದಿಗಳ ಕೊಲೆಗೆ ಶೂಟರ್ ಗಳ ಹೆಸರನ್ನು ಅಮೋಲ್​ ಕಾಳೆ ಕೋಡ್ ವರ್ಡ್​ನಲ್ಲಿ ಬರೆದಿಟ್ಟುಕೊಂಡಿದ್ದ. ಗೌರಿ ಲಂಕೇಶ್​ ಅವರನ್ನು ಕೊಂದ ಪರಶುರಾಮ್​ ವಾಗ್ಮೋರೆಯೇ ನರೇಂದ್ರ ನಾಯಕ್​ ಅವರನ್ನು ಕೂಡ ಕೊಲ್ಲುವವನಿದ್ದ. ಕಾಳೆ ಬಳಿಯಿದ್ದ ಡೈರಿಯಲ್ಲಿ ವಾಗ್ಮೋರೆಗೆ 'ಬಿಲ್ಡರ್' ಎಂಬ ಕೋರ್ಡ್ ವರ್ಡ್ ನೀಡಲಾಗಿತ್ತಂತೆ.
ನಾಲ್ವರಿಗೂ ನಾಲ್ಕು ಕೋಡ್ ವರ್ಡ್!
ಇನ್ನು ಗಿರೀಶ್​ ಕಾರ್ನಾಡ್ ಅವರಿಗೆ 'ಕಾಕಾ', ನಿಡುಮಾಮಿಡಿ ಸ್ವಾಮಿಜಿಗೆ 'ಸ್ವಾಮಿ' ಎಂಬ ಕೋರ್ಡ್ ವರ್ಡ್ ನೀಡಲಾಗಿತ್ತು. ಗೌರಿ ಲಂಕೇಶ್​ಗೆ 'ಅಮ್ಮ', ಅವರ ಮನೆಗೆ 'ಗೋಶಾಲೆ' ಎಂದು ಕೋಡ್​ವರ್ಡ್​ ಇಟ್ಟುಕೊಳ್ಳಲಾಗಿತ್ತು. ಡೈರಿಯಲ್ಲಿ ಮರಾಠಿ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಬರೆದಿದ್ದ ಕಾಳೆ ನಾಲ್ವರು ವಿಚಾರವಾದಿಗಳ ಹತ್ಯೆಗೆ ನಾಲ್ವರು ಶೂಟರ್ ಗಳನ್ನು ಕೂಡ ಫಿಕ್ಸ್ ಮಾಡಿದ್ದ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕಾಳೆ ಕೈಬರಹವನ್ನು ಹೋಲಿಕೆ ಮಾಡಲಾಗಿದ್ದು, ಡೈರಿಯ ಬರಹಕ್ಕೆ ಅದು ತಾಳೆಯಾಗಿದೆ. ಹತ್ಯೆಗೆ ವಿಚಾರವಾದಿಗಳು ಅಷ್ಟೇ ಅಲ್ಲದೆ, ಕುಟುಂಬಸ್ಥರು , ಎಸ್ ಐಟಿ ತನಿಖಾಧಿಕಾರಿಗಳ ಹಿಟ್ ಲಿಸ್ಟ್ ಅನ್ನು ಆರೋಪಿಗಳು ಸಿದ್ದಪಡಿಸಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com