'ಟಾರ್ಗೆಟ್' ಗೌರಿ ಮಾತ್ರವೇ ಅಲ್ಲ, ಹಿಟ್ ಲಿಸ್ಟ್ ನಲ್ಲಿದ್ದರು ಇನ್ನೂ 36 ಜನ!

ಎಸ್ ಐಟಿ ಅಧಿಕಾರಿಗಳ ಬಂಧನದಲ್ಲಿರುವ ಶಂಕಿತರು ತಮ್ಮ ಕೃತ್ಯದ ಕುರಿತು ಸ್ಫೋಟಕ ಮಾಹಿತಿ ಹೊರಹಾಕುತ್ತಿದ್ದು, ತಮ್ಮ ಟಾರ್ಗೆಟ್ ಲಿಸ್ಟ್ ನಲ್ಲಿ ಗೌರಿ ಮಾತ್ರವೇ ಇರಲಿಲ್ಲ, ಇನ್ನೂ 36 ಮಂದಿ ಇದ್ದರು ಎಂದು ಹೇಳಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಪ್ರಕರಣದ ಪ್ರಮುಖ ಆರೋಪಿಗಳು ಪ್ರಸ್ತುತ ಬಂಧನಕ್ಕೀಡಾಗಿದ್ದಾರೆ. ಆದರೆ ಎಸ್ ಐಟಿ ಅಧಿಕಾರಿಗಳ ಬಂಧನದಲ್ಲಿರುವ ಶಂಕಿತರು ತಮ್ಮ ಕೃತ್ಯದ ಕುರಿತು ಸ್ಫೋಟಕ ಮಾಹಿತಿ ಹೊರಹಾಕುತ್ತಿದ್ದು, ತಮ್ಮ ಟಾರ್ಗೆಟ್ ಲಿಸ್ಟ್ ನಲ್ಲಿ ಗೌರಿ ಮಾತ್ರವೇ ಇರಲಿಲ್ಲ, ಇನ್ನೂ 36 ಮಂದಿ ಇದ್ದರು ಎಂದು ಹೇಳಿಕೊಂಡಿದ್ದಾರೆ.
ಖ್ಯಾತ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಬಂಧಿತ ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಬಂಧಿತರು ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಹಾಕುತ್ತಿದ್ದಾರೆ. ಶಂಕಿತರ ಹಿಟ್ ಲಿಸ್ಟ್ ನಲ್ಲಿ ಕೇವಲ ಗೌರಿ ಲಂಕೇಶ್ ಮಾತ್ರವೇ ಇರಲಿಲ್ಲವಂತೆ, ಅವರ ಹಿಟ್ ಲಿಸ್ಟ್ ನಲ್ಲಿ ಇನ್ನೂ 36 ಮಂದಿ ವಿಚಾರವಾದಿಗಳು ಇದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಶಂಕಿತ ಬಂಧಿತ ವ್ಯಕ್ತಿ ಅಮೋಲ್ ಕಾಳೆ ಈ ಬಗ್ಗೆ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಡೈರಿಯಲ್ಲಿ ಗೌರಿ ಲಂಕೇಶ್ ಅವರಂತೆಯೇ ಇನ್ನೂ 36 ಮಂದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳೇ ಅಮೋಲ್ ಕಾಳೆ ಡೈರಿಯಲ್ಲಿದ್ದ ಮಾಹಿತಿ ನೋಡಿ ದಂಗಾಗಿ ಹೋಗಿದ್ದು, ಗೌರಿ ಮಾತ್ರವಲ್ಲದೇ ದೇಶದ ಇತರೆ 36 ವಿಚಾರವಾದಿಗಳ ಹತ್ಯೆಗೂ ಭಾರಿ ಸಂಚು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ.
ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕಾಳೆ ಕೈಬರಹವನ್ನು ಹೋಲಿಕೆ ಮಾಡಲಾಗಿದ್ದು, ಡೈರಿಯ ಬರಹಕ್ಕೆ ಅದು ತಾಳೆಯಾಗಿದೆ. ಹತ್ಯೆಗೆ ವಿಚಾರವಾದಿಗಳು ಅಷ್ಟೇ ಅಲ್ಲದೆ, ಕುಟುಂಬಸ್ಥರು , ಎಸ್ ಐಟಿ ತನಿಖಾಧಿಕಾರಿಗಳ ಹಿಟ್ ಲಿಸ್ಟ್ ಅನ್ನು ಆರೋಪಿಗಳು ಸಿದ್ದಪಡಿಸಿದ್ದರು ಎನ್ನಲಾಗಿದೆ.
ತಲೆಕೂದಲಿನಿಂದ ಸಿಕ್ಕಿತ್ತು ಸುಳಿವು!
ಹೌದು, ತನಿಖೆಯ ಬೆನ್ನತ್ತಿ ಹೊರಟ ಎಸ್​ಐಟಿ ಅಧಿಕಾರಿಗಳಿಗೆ ಅಮೋಲ್​ ಕಾಳೆಯ ಸಂಚಿನ ಬಗ್ಗೆ ಸುಳಿವು ಕೊಟ್ಟಿದ್ದು ತಲೆಕೂದಲು!. ಅಮೋಲ್​ ಕಾಳೆ ವಿಚಾರವಾದಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಂಬುದಕ್ಕೆ ತಲೆಕೂದಲೇ ಎಸ್​ಐಟಿಗೆ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿತು. ಕುಣಿಗಲ್ ಸುರೇಶ್  ಅವರ ಮನೆಯಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಸಿಕ್ಕ ತಲೆಕೂದಲು ಕಾಳೆಯದ್ದೇ ಎಂದು ಎಫ್​ಎಸ್​ಎಲ್​ ನೀಡಿದ್ದ ವರದಿಯಿಂದ ಅಧಿಕಾರಿಗಳ ಅನುಮಾನ ಖಾತರಿಯಾಗಿತ್ತು. ಕೃತ್ಯಕ್ಕೆ ಬಳಸಲಾಗಿದ್ದ ಪಿಸ್ತೂಲು ಸಿಗದಿದ್ದರೂ ಎಸ್​ಐಟಿ ಅಧಿಕಾರಿಗಳು ವೈಜ್ಞಾನಿಕ ಸಾಕ್ಷಿಗಳನ್ನು ಕಲೆ ಹಾಕಿದ್ದರು ಎಂಬ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com