ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ನಾಳೆ ಭಾರತ್ ಬಂದ್: ರಾಜ್ಯಕ್ಕೆ ತಟ್ಟಲಿದೆಯೇ ಬಂದ್ ಬಿಸಿ?

ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೆ.10 ರಂದು ಕರೆ ನೀಡಿರುವ ಭಾರತ ಬಂದ್ ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಕೆಲ ಸೇವೆಗಳಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೆ.10 ರಂದು ಕರೆ ನೀಡಿರುವ ಭಾರತ ಬಂದ್ ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಕೆಲ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. 
ಬಂದ್'ಗೆ ರಾಜ್ಯದ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಬೆಂಬಲ ನೀಡಿರುವ ಕಾರಣ ಹರತಾಳ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಬಂದ್ ಕರೆಗೆ ಎಐಟಿಯುಸಿ ಸಂಯೋಜಿತ ಕೆಎಸ್ಆರ್'ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್, ಓಲಾ-ಉಬರ್ ಟ್ಯಾಕ್ಸಿ ಫಾರ್ ಶೂರ್ ಮಾಲೀಕರ ಸಂಘ, ಕೆಲ ಆಟೋ ಚಾಲಕರನ ಸಂಘಗಳು ಬಂದ್'ಗೆ ಬೆಂಬಲ ಘೋಷಿಸಿದ್ದು, ನಾಳೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೂ ವಾಹನಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿವೆ. 
ನಗರದ ಕೆ.ಆರ್. ಮಾರುಕಟ್ಟೆ, ತರಕಾರಿ ಹಣ್ಣು, ಸಗಟು ಮಾರಾಟಗಾರರ ಸಂಘ, ಕನ್ನಡ ಒಕ್ಕೂಟ, ಕನ್ನಡ ಸೇನೆ, ಜಯ ಕರ್ನಾಟಕ ಸಂಘಟನೆ ಸೇರಿದಂತೆ ಕೆಲ ಕನ್ನಡಪರ ಸಂಘಟನೆಗಳೂ ಕೂಡ ಬಂದ್'ಗೆ ಬೆಂಬಲ ಸೂಚಿಸಿವೆ. 
ಟ್ಯಾಕ್ಸಿ, ಆಟೋ, ಬಿಎಂಟಿಸಿ, ಕೆಆರ್'ಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವುದರಿಂದ ಬಂದ್ ಬಿಸಿ ತಟ್ಟುವ ಸಾಧ್ಯತೆಗಳಿವೆ. ಖಾಸಗಿ ಶಾಲಾ-ಕಾಲೇಜುಗಳನ್ನು ಎಂದಿನಂತೆ ಮುನ್ನಡೆಸಲು ನಿರ್ಧರಿಸಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. 
ಇನ್ನು ಸರ್ಕಾರ ಶಾಲಾ-ಕಾಲೇಜುಗಳ ರಜೆ ನೀಡುವ ಕುರಿತು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ಈ ನಡುವೆ ಕೆಲ ಸಂಘಟನೆಗಳು ಇದು ರಾಜಕೀಯ ಪ್ರೇರಿತ ಬಂದ್ ಎಂದು ಬೆಂಬಲ ನೀಡದಿರಲು ನಿರ್ಧರಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com