ಶೇ.95ರಷ್ಟು ಗುಂಡಿಗಳನ್ನು ಮುಚ್ಚಿದ್ದೇವೆ; ಬಿಬಿಎಂಪಿ ಹೇಳಿಕೆ

ನಗರದ ಹಲವು ಭಾಗಗಳ ರಸ್ತೆಗಳಲ್ಲಿ ಗುಂಡಿಗಳು ಇನ್ನೂ ಸವಾರರಿಗೆ ತೊಂದರೆಯಾಗಿದೆ ಎಂದು ...
ಬೆಂಗಳೂರಿನಲ್ಲಿ ಹೊಂಡ, ಗುಂಡಿಯ ದುರವಸ್ಥೆ
ಬೆಂಗಳೂರಿನಲ್ಲಿ ಹೊಂಡ, ಗುಂಡಿಯ ದುರವಸ್ಥೆ

ಬೆಂಗಳೂರು: ನಗರದ ಹಲವು ಭಾಗಗಳ ರಸ್ತೆಗಳಲ್ಲಿ ಗುಂಡಿಗಳು ಇನ್ನೂ ಸವಾರರಿಗೆ ತೊಂದರೆಯಾಗಿದೆ ಎಂದು ನಿವಾಸಿಗಳು ಹೇಳುತ್ತಿದ್ದರೆ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಹಿಂದೆ ಗುರುತಿಸಿದ 3,176 ಹೊಂಡ, ಗುಂಡಿಗಳ ಪೈಕಿ ಶೇಕಡಾ 95ರಷ್ಟು ಭರ್ತಿಯಾಗಿದೆ ಎಂದು ಹೇಳುತ್ತಿದೆ.

ಬೆಂಗಳೂರು ನಗರದಾದ್ಯಂತ ಇರುವ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್ ಇಂದಿನವರೆಗೆ ಗಡುವು ನೀಡಿತ್ತು. ನಿನ್ನೆ ಸರ್ಕಾರಿ ರಜೆ ಆದರೂ ಕೂಡ ತಡರಾತ್ರಿಯವರೆಗೆ ಕೆಲಸ ಮಾಡಿದ್ದು ಹೈಕೋರ್ಟ್ ನೀಡಿರುವ ಗಡುವು ದಿನಾಂಕ ಪ್ರಕಾರ ನಿನ್ನೆಯೊಳಗೆ ಗುಂಡಿಗಳನ್ನು ಮುಚ್ಚಬೇಕಾಗಿತ್ತು. ಸೋಮವಾರದವರೆಗೆ ಮಳೆ ಬಾರದಿದ್ದರೆ ನಮ್ಮ ಕೆಲಸ ಮುಗಿಯುತ್ತಿತ್ತು. ಆದರೆ ಕಳೆದ ರಾತ್ರಿಯಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನ ಎಂಟು ವಲಯಗಳಲ್ಲಿ 3,017 ಗುಂಡಿಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್ ಗೆ ತಿಳಿಸಿತ್ತು. ಅವುಗಳನ್ನು ಮುಚ್ಚುವ ಸಂದರ್ಭದಲ್ಲಿ 105 ಹೊಸ ಗುಂಡಿಗಳು ಪತ್ತೆಯಾಗಿವೆ. ನಿನ್ನೆ ಬಿಬಿಎಂಪಿ 3 ಸಾವಿರ ಗುಂಡಿಗಳನ್ನು ಮುಚ್ಚಿದೆ ಎಂದು ಹೇಳಿದೆ. ನಾವು ಹೈಕೋರ್ಟ್ ನ ಆದೇಶಕ್ಕೆ ತಲೆಬಾಗಿದ್ದು ನಮ್ಮ ಬದ್ಧತೆಯನ್ನು ಉಳಿಸಿಕೊಂಡಿದ್ದೇವೆ. ನಿನ್ನೆಯವರೆಗೆ ಮಳೆಯಿಲ್ಲದ್ದು ನಮಗೆ ನೆರವಾಯಿತು ಎನ್ನುತ್ತಾರೆ ಮೇಯರ್ ಸಂಪತ್ ರಾಜ್.

ಇಂದು ಮಧ್ಯರಾತ್ರಿಯಿಂದಲೇ ಮಳೆ ಸುರಿಯುತ್ತಿರುವುದರಿಂದ ನಾಳೆಯಿಂದ ಮತ್ತೆ ಗುಂಡಿ ಮುಚ್ಚುವ ಕಾರ್ಯ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

2015ರಲ್ಲಿ ಕೋರಮಂಗಲದ ನಾಲ್ವರು ನಿವಾಸಿಗಳು ಸಲ್ಲಿಸಿದ ಅರ್ಜಿ ಸಂಬಂಧ ಕಳೆದ ಬುಧವಾರ ಆದೇಶ ನೀಡಿದ್ದ ಹೈಕೋರ್ಟ್ ಮರುದಿನವೇ ಗುಂಡಿಗಳೆಲ್ಲವನ್ನೂ ಮುಚ್ಚಬೇಕು ಎಂದು ಹೇಳಿತ್ತು. ಅಲ್ಲದೆ ಬಿಬಿಎಂಪಿ ಮೇಲೆ ಛೀಮಾರಿ ಹಾಕಿದ್ದ ಹೈಕೋರ್ಟ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕಚೇರಿಯನ್ನೇ ಮುಚ್ಚಿ ಎಂದು ಹೇಳಿದ್ದರು. ರಸ್ತೆಯ ಗುಂಡಿ ಮುಚ್ಚಿದ ಕಾಮಗಾರಿ ಮಾಡಿದ ಕಾಂಟ್ರಾಕ್ಟರ್ ಮತ್ತು ಎಂಜಿನಿಯರ್ ಗಳ ಹೆಸರು ಕೊಡಿ ಎಂದು ಕೂಡ ನ್ಯಾಯಾಲಯ ಹೇಳಿತ್ತು. ನಂತರ ನ್ಯಾಯಾಲಯ ಕಳೆದ ಗುರುವಾರ ಗುಂಡಿ ಮುಚ್ಚುವ ಅವಧಿಯನ್ನು ಇಂದಿಗೆ ಮುಂದೂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com