

ಬೆಂಗಳೂರು: ಒಂದು ತುಂಡು ಜಮೀನಿಗಾಗಿ ಎರಡು ಕೊಲೆ ಮಾಡಿದ್ದ ಎಂಟು ಮಂದಿ ಆರೋಪಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಾವಲುಗಾರನಾಗಿರುವ ವೆಂಕಟಸ್ವಾಮಿ ತನ್ನ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಪೊಲೀಸರ ಮುಂದೆ ನಾಟಕವಾಡಿದ್ದ. ಮೊನ್ನೆ ಸೆಪ್ಟೆಂಬರ್ 18ರಂದು ಆತ ತನ್ನ ಪತ್ನಿ ಸುಧಾರಾಣಿಯನ್ನು ಹತ್ಯೆಗೈದಿದ್ದ. ನಂತರ ಪೊಲೀಸರ ಬಳಿ ತಾನೇ ಹೋಗಿ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ.
ಆದರೆ ಅಪರಾಧ ನಡೆದ ಸ್ಥಳ ಮತ್ತು ಪರಿಸ್ಥಿತಿ ನೋಡಿದಾಗ ಪೊಲೀಸರಿಗೆ ಸಂಶಯ ಬಂದು ವೆಂಕಟಸ್ವಾಮಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.
ತನಿಖೆಯಲ್ಲಿ ಸತ್ಯ ಬಾಯ್ಬಿಟ್ಟ ವೆಂಕಟಸ್ವಾಮಿ, ತಮ್ಮ ಗ್ಯಾಂಗ್ ನ ಸದಸ್ಯರು ಬೆಳತೂರು ಸಮೀಪವಿರುವ 1.08 ಎಕರೆ ಜಮೀನನ್ನು ಪಡೆದುಕೊಳ್ಳಲು ಈ ಕೃತ್ಯವೆಸಗಿದ್ದಾಗಿ ಬಾಯ್ಬಿಟ್ಟಿದ್ದಾನೆ. ಭೂಮಿ 12ರಿಂದ 15 ಕೋಟಿ ಬೆಲೆ ಬಾಳುವುದಾಗಿದೆ. ಈ ಸಂಬಂಧ ಈಗಾಗಲೇ ಈ ಮೊದಲು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದು ಅದು ವೆಂಕಟಸ್ವಾಮಿ ಪತ್ನಿಗೆ ಗೊತ್ತಾಗಿತ್ತು. ಹೀಗಾಗಿ ಪತ್ನಿಯನ್ನು ಕೂಡ ಕೊಲ್ಲಲಾಯಿತು.
ವೆಂಕಟಸ್ವಾಮಿ ನೀಡಿದ ಮಾಹಿತಿ ಆಧಾರದ ಮೇಲೆ ಪ್ರಮುಖ ಆರೋಪಿ ರಿಯಲ್ ಎಸ್ಟೇಟ್ ಉದ್ಯಮಿ ಎಸ್ ರಮೇಶ್ ಅಲಿಯಾಸ್ ಬೆಳತ್ತೂರು ರಮೇಶ್ ನನ್ನು ಬಂಧಿಸಲಾಗಿದೆ. ಕೊಲೆಯಲ್ಲಿ ಭಾಗಿಯಾದ ಇತರ 6 ಮಂದಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.