ಒಬ್ಬನೇ ಫಲಾನುಭವಿಗೆ 4-5 ಮನೆ, ದೋಸ್ತಿ ಸರ್ಕಾರದಲ್ಲಿ ವಸತಿ ಯೋಜನೆ ಅಕ್ರಮ: ವಿ ಸೋಮಣ್ಣ ಆರೋಪ

ಜೆಡಿಎಸ್-ಕಾಂಗ್ರೆಸ್ ಹಿಂದಿನ ಸರ್ಕಾರದಲ್ಲಿ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಹಗರಣ ನಡೆದಿದ್ದು, ಒಬ್ಬನೇ ಫಲಾನುಭವಿಗೆ ೪ ರಿಂದ ೫ ಮನೆಗಳನ್ನು ಮಂಜೂರು ಮಾಡಿ ಅಕ್ರಮ ನಡೆಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಆಪಾದಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಸತಿ ಫಲಾನುಭವಿಗಳ ಆಯ್ಕೆಗಾಗಿ ತಹಸಿಲ್ದಾರ್, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಶಾಸಕರ ಪರಿಶೀಲನೆ ಕಡ್ಡಾಯ: ವಿ. ಸೋಮಣ್ಣ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಹಿಂದಿನ ಸರ್ಕಾರದಲ್ಲಿ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಹಗರಣ ನಡೆದಿದ್ದು, ಒಬ್ಬನೇ ಫಲಾನುಭವಿಗೆ ೪ ರಿಂದ ೫ ಮನೆಗಳನ್ನು ಮಂಜೂರು ಮಾಡಿ ಅಕ್ರಮ ನಡೆಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಆಪಾದಿಸಿದ್ದಾರೆ. 

ಇನ್ನು ಮುಂದೆ ವಸತಿ ಯೋಜನೆಗಳ ಪ್ರಯೋಜನವನ್ನು ಅರ್ಹ ಬಡವರಿಗೆ ತಲುಪಿಸಲು ತಹಿಸೀಲ್ದಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಾಸಕರ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ ಎಂದರು. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹರಿಗೆ ದೊರೆಯಬೇಕಿದ್ದ ವಸತಿ ಯೋಜನೆಗಳ ಪ್ರಯೋಜನ ಉಳ್ಳವರ ಪಾಲಾಗಿದ್ದು, ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ವಸತಿ ಇಲಾಖೆಯಲ್ಲಿ ನ್ಯೂನ್ಯತೆಗಳಿದ್ದು, ಇವುಗಳನ್ನು ಸರಿಪಡಿಸಲಾಗುತ್ತಿದೆ. ಚಿತ್ರದುರ್ಗ, ಕಣಜ ಹಳ್ಳಿಯಲ್ಲಿ ೧೦ ರಿಂದ ಹಲವಾರು ಭಾರಿ ಒಂದೇ ಫಲಾನುಭವಿಗೆ ಹಣ ನೀಡಿರುವುದು ತಿಳಿದು ಬಂದಿದೆ. ಈ ಪ್ರಕಣರದಲ್ಲಿ ಪಿಡಿಓ ಕಾರ್ಯದರ್ಶಿ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಮೊಬೈಲ್ ಆಪ್ ಮೂಲಕ ವಸತಿ ಸೌಲಭ್ಯ ವಿತರಣೆ ಹಾಗೂ ನಿರ್ಮಾಣದ ಮೇಲೆ ಕಣ್ಗಾವಲು ವ್ಯವಸ್ಥೆ ಹಾಕಲಾಗಿದೆ. ಒಬ್ಬ ವ್ಯಕ್ತಿ ಹಲವು ಯೋಜನೆಗಳಿಂದ ಮನೆ ಪಡೆಯುವುದನ್ನು ತಪ್ಪಿಸಲು ಎಲ್ಲಾ ಯೋಜನೆಗಳನ್ನು ಒಂದೇ ವ್ಯವಸ್ಥೆಯಡಿ ತರುವ ಆಲೋಚನೆಯಿದೆ. ವಸತಿ ಯೋಜನೆಯಡಿ ಅಪರಾಧವೆಸಗುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಕಲ್ಪಿಸುವಂತೆ ಹೊಸ ಕಾನೂನನ್ನು ಜಾರಿಗೆ ತರುವ ಚಿಂತನೆಯಿದೆ ಎಂದು ಅವರು ತಿಳಿಸಿದರು. 

ಕಳೆದ ಆರು ವರ್ಷಗಳಲ್ಲಿ 28 ಲಕ್ಷ ಮನೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪೈಕಿ 14 ಕಾಮಗಾರಿ ಮುಗಿದಿದೆ. ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಎರಡು ಲಕ್ಷ, ಉಳಿದ ಯೋಜನೆಗಳಲ್ಲಿ 6 ಲಕ್ಷ ಮನೆಗಳನ್ನು ನಿರ್ಮಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ‌ ಇಲ್ಲ ಎಂದರು. 

ಬೆಂಗಳೂರು ನಗರ ವಸತಿ ಯೋಜನೆ ಅಡಿ "ಮುಖ್ಯಮಂತ್ರಿ ಮನೆ" ಯೋಜನೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಇದರಡಿ 4437 ಕೋಟಿ ರೂಗಳ 3035 ಕೋಟಿ ರೂಗಳ ಪ್ಯಾಕೇಜ್ ಗೆ ಅನುಮೋದನೆ ನೀಡಲಾಗಿದೆ. ಆದರೆ ಈ ಯೋಜನೆಗೆ ಭೂಮಿ ನೀಡಿರಲಿಲ್ಲ. ಇದೀಗ ಬರುವ ವರ್ಷದ ವೇಳೆಗೆ ವಸತಿ ಯೋಜನೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ ಎಂದರು.  ಮನೆ ನಿರ್ಮಾಣ ಮಾಡುವಾಗ ಮೊಬೈಲ್ ವಿಶಲ್ ಆ್ಯಪ್ ಹಾಗೂ ತಾಂತ್ರಿಕ ಅಂಶಗಳನ್ನು ಬಳಸಿ ಮನೆ ನಿರ್ಮಾಣ ಕಾಮಗಾರಿ ಪರಿಶೀಲಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕಾಮಗಾರಿಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.  

ಕರ್ನಾಟಕವನ್ನು ಕೊಳಚೆ ಮುಕ್ತ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡರೆ 3.50 ಲಕ್ಷ ರೂಹಣ ನೀಡುತ್ತೇವೆ. ಜತೆಗೆ ಎಲ್ಲರಿಗೂ ಸೂರು ಒದಗಿಸಲು ಗೃಹ ಮಂಡಳಿಯಿಂದ ಒಂದು ಸಾವಿರ ಕೋಟಿ ರೂ ಹೂಡಿಕೆ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ 40/60, 30/40 ನಿವೇಶನ ಹಂಚಿಕೆ‌ ಮಾಡಲು ತೀರ್ಮಾನಿಸಲಾಗಿದೆ ಎಂದರು. ಕರ್ನಾಟಕ ಗೃಹ ಮಂಡಳಿ ಬಳಿ 3000 ಕೋಟಿ ರೂ ಆಸ್ತಿ ಇದೆ. ಹೊಸಕೋಟೆ, ಚಲ್ಲಘಟ್ಟ, ಕೆಂಚಲಗೂಡು , ಕೊಪ್ಪಳ, ಗದನ ಸೇರಿ 8 ಪ್ರದೇಶಗಳಲ್ಲಿ 40 ಎಕರೆ ಜಾಗದಲ್ಲಿ ಒಂದು, ಎರಡು ಕೊಠಡಿಗಳ 3 ರಿಂದ 3,500 ಸಾವಿರ ಮನೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com