

ಬೆಂಗಳೂರು: ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆಗಳಿದ್ದು, ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿದ್ಧತೆಗಳನ್ನು ಆರಂಭಿಸಿದ್ದಾರೆಂದು ತಿಳಿದುಬಂದಿದೆ.
ಸಂಪುಟ ವಿಸ್ತರಣೆ ಜೊತೆ ಜೊತೆಗೆ ಯಡಿಯೂರಪ್ಪ ಅವರಿಗೆ ರಾಜ್ಯ ಬಜೆಟ್ ಕೂಡ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬಜೆಟ್ ಹಿನ್ನೆಲೆಯಲ್ಲಿ ಸಿದ್ಧತೆ ಆರಂಭಿಸಿರುವ ಯಡಿಯೂರಪ್ಪ ಅವರು ಇದೀಗ ಹಲವು ವಲಯಗಳ ತಜ್ಞರೊಂದಿಗೆ ಸಭೆಗಳನ್ನು ಆರಂಭಿಸಿದ್ದಾರೆ. ಈ ನಡುವೆ ಆರ್ಥಿಕ ಇಲಾಖೆ ಇತರೆ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವಂತೆ ಎಲ್ಲಾ ಇಲಾಖೆಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಿವೆ.
ಪ್ರಸ್ತುತ ದೇಶದಲ್ಲಿ ಆರ್ಥಿಕ ಹಿಂಜರಿಕೆ ಸಮಸ್ಯೆ ಎದುರಾಗಿದ್ದೂ, ಈ ನಡುವೆ ರಾಜ್ಯಕ್ಕೆ ತೆರಿಗೆ ಹಣದ ಭಾಗವನ್ನೂ ಕೇಂದ್ರ ಸರ್ಕಾರ ನೀಡುತ್ತಿಲ್ಲ. ಹಿಂದಿನ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದು, ಇದಕ್ಕಾಗಿ ದೊಡ್ಡ ಮೊತ್ತದ ಹಣದ ಅಗತ್ಯವಿದೆ. ಸರ್ಕಾರ ಮರುಪಾವತಿ ಮಾಡಬೇಕಾದ ಸಾಕಷ್ಚು ಸಾಲವಿದೆ.
ರಾಜ್ಯ ಸರ್ಕಾರ ಆರ್ಥಿಕ ಸ್ಥಿತಿಯಲ್ಲಿ ಸೂಕ್ತ ಪರಿಸ್ಥಿತಿಯಲ್ಲಿಲ್ಲ. ಮುಂಬೈ ಹಾಗೂ ದೆಹಲಿ ಬಳಿಕ ಕರ್ನಾಟಕ ಮನರಂಜನಾ ಕೇಂದ್ರವೆಂದು ಹೇಳಲಾಗುತ್ತಿದೆ. ಈ ಬಾರಿ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಮನರಂಜನೆ ಹಾಗೂ ಅಬಕಾರಿ ಸುಂಕವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಅಲ್ಲದೆ, ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಪ್ರಸಿದ್ಧ ಯೋಜನೆಗಳನ್ನು ಕೈಬಿಡುವ ಅಥವಾ ನೀಡಲಾಗುತ್ತಿದ್ದ ಅನುದಾನದಲ್ಲಿ ಕಡಿತ ಮಾಡಬಹುದು. ಇದನ್ನು ಬಜೆಟ್ ನಲ್ಲಿ ಘೋಷಣೆ ಮಾಡದೆ ಕೂಡ ಇರಬಹುದು ಎಂದು ಆರ್ಥಿಕ ಪ್ರೊಫೆಸರ್ ಆರ್.ಎಸ್.ದೇಶಪಾಂಡೆಯವರು ಹೇಳಿದ್ದಾರೆ.
ಇನ್ನು ಸಮಾಜ ಕಲ್ಯಾಣ ಯೋಜನೆಗಳಿಗೆ ಮೀಸಲಿರಿಸಲಾಗಿದ್ದ ಹಣ ಬಳಕೆಯಾಗಿಲ್ಲ. ಈ ಹಣವನ್ನು ಇತರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ದೊಡ್ಡ ಘೋಷಣೆಗಳಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
2011ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಆರ್ಥಿಕ ಸಚಿವ ಸ್ಥಾನವನ್ನೂ ಅವರೇ ಹೊಂದಿದ್ದರು. ಅಂದು ಎರಡು ಭಾಗಗಳಲ್ಲಿ ಬಜೆಟ್ ಮಂಡನೆ ಮಾಡಿದ್ದರು. ರಾಜ್ಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೃಷಿ ವಲಯವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿತ್ತು.
ಕೃಷಿ ಹಾಗೂ ನೀರಾವರಿ ವಲಯಗಳಿಗೆ ಯಡಿಯೂರಪ್ಪ ಅವರು ಬರೋಬ್ಬರಿ ರೂ.17,587 ಕೋಟಿ ಮೀಸಲಿಟ್ಟಿದ್ದರು. ಇದೇ ರೀತಿಯ ಬಜೆಟ್ ಈ ಬಾರಿ ಕೂಡ ಮಂಡನೆಯಾಗುವ ಸಾಧ್ಯತೆಗಳಿವೆ.
ಈ ಬಾರಿ ಬಜೆಟ್ ನಲ್ಲಿ ಯಡಿಯೂರಪ್ಪ ಅವರು ಕೃಷಿ ವಲಯದತ್ತ ಹೆಚ್ಚು ಗಮನ ಹರಿಸಲಿದ್ದು, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೈತರ ಸಮಸ್ಯೆಗಳತ್ತ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಹೆಚ್ಚು ಗಮನ ಹರಿಸಲಿದ್ದು, ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.