

ತುಮಕೂರು: ಪ್ರಯಾಣಿಕನ ಹಠಕ್ಕೆ ಮಣಿದು ಚಾಲಕ ಬಸ್ಸನ್ನು ನಿಲ್ಲಿಸಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿಯೊಂದು ಢಿಕ್ಕಿಯಾಗಿ ಓರ್ವ ಸಾವನ್ನಪ್ಪಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಶಿರಾ ಬಳಿ ನಡೆದಿದೆ.
ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರಂಗೆರೆಯ ಬಳಿ ಬಸ್ ಗೆ ಲಾರಿಢಿಕ್ಕಿಯಾಗಿ ಓರ್ವ ಅಮಾಯಕ ಸಾವನ್ನಪ್ಪಿದ್ದಾನೆ. ಹತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಬಸ್ ಸಾಗುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ತನಗೆ ಮೂತ್ರ ಂಆಡಬೇಕಿದೆ, ಇಲ್ಲೇ ಬಸ್ ನಿಲ್ಲಿಸಿ ಎಂದು ಚಾಲಕನಿಗೆ ಮನವಿ ಮಾಡಿದ್ದಾನೆ. ಆದರೆ ಚಾಲಕ "ಇದು ಅಪಘಾತ ವಲಯ" ಮುಂದೆ ನಿಲ್ಲಿಸುತ್ತೇನೆ ಎಂದಿದ್ದ. ಆಗ ಪ್ರಯಾಣಿಕ ಸುಮ್ಮನಾಗದೆ ಅಲ್ಲಿಯೇ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದಾನೆ. ಪ್ರಯಾಣಿಕನ ಹಠಕ್ಕೆ ಮಣಿದ ಚಾಲಕ ಬಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ. ಅದೇ ವೇಳೆ ರಭಸವಾಗಿ ಬರುತ್ತಿದ್ದ ಲಾರಿಯೊಂದು ಬಸ್ ನ ಹಿಂಭಾಗಕ್ಕೆ ಢಿಕ್ಕಿಯಾಗಿದೆ. ರಾತ್ರಿಯಾಗಿದ್ದ ಕಾರಣ ಲಾರಿ ಚಾಲಕನಿಗೆ ಬಸ್ ರಸ್ತೆ ಬದಿ ನಿಂತಿರುವುದು ಕಂಡಿಲ್ಲ. ಢಿಕ್ಕಿಯಾದ ರಭಸಕ್ಕೆ ಬಸ್ ಹಳ್ಳಕ್ಕೆ ಉರುಳಿದೆ.ಇದರಿಂದ ಹೊಂಭಾಗದಲ್ಲಿ ಕುಳಿತಿದ್ದ ಮಲ್ಲಪ್ಪ ಸಜ್ಜನ್ (40) ಎಂಭಾತ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯಲ್ಲಿ ಹತ್ತು ಮಂದಿಗೆ ಗಾಯಗಳಾಗಿದ್ದು ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಬಸ್ ಚಾಲಕ ಅಪಘಾತಕ್ಕೆ ಕಾರಣನಾದ ಬಸ್ ಪ್ರಯಾಣಿಕನ ಮೇಲೆ ಹರಿಹಾಯ್ದಿದ್ದಾನೆ. ಸಧ್ಯ ಬಸ್ ನಿಲ್ಲಿಸಲು ಹೇಳಿದ್ದ ಆ ಪ್ರಯಾಣಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಕುರಿತಂತೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.