ಎಚ್ಎಎಲ್ ವಿಮಾನ ದುರಂತ: ನೂರಾರು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ಬಿಟ್ಟ ಪೈಲಟ್ ಗಳು?

ನಿನ್ನೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ಭಾರತೀಯ ವಾಯುಸೇನೆಯ ತರಬೇತಿ ಯುದ್ಧ ವಿಮಾನ ಅಪಘಾತದ ತನಿಖೆ ಮುಂದುವರೆದಿದ್ದು, ದುರಂತದಲ್ಲಿ ಸಾವನ್ನಪ್ಪಿದ ಪೈಲಟ್ ಗಳು ನೂರಾರು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ಬಿಟ್ಟರೇ ಎಂಬ ಅನುಮಾನ ಕಾಡುತ್ತಿದೆ.
ಎಚ್ಎಎಲ್ ನಲ್ಲಿ ವಿಮಾನ ಪತನ
ಎಚ್ಎಎಲ್ ನಲ್ಲಿ ವಿಮಾನ ಪತನ
Updated on
ಬೆಂಗಳೂರು: ನಿನ್ನೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ಭಾರತೀಯ ವಾಯುಸೇನೆಯ ತರಬೇತಿ ಯುದ್ಧ ವಿಮಾನ ಅಪಘಾತದ ತನಿಖೆ ಮುಂದುವರೆದಿದ್ದು, ದುರಂತದಲ್ಲಿ ಸಾವನ್ನಪ್ಪಿದ ಪೈಲಟ್ ಗಳು ನೂರಾರು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ಬಿಟ್ಟರೇ ಎಂಬ ಅನುಮಾನ ಕಾಡುತ್ತಿದೆ.
ಹೌದು.. ನಿನ್ನೆ ಸಂಭವಿಸಿದ ಯುದ್ಧವಿಮಾನ ಅಪಘಾತದಲ್ಲಿ ಹುತಾತ್ಮರಾದ ಇಬ್ಬರು ಪೈಲಟ್ ಗಳು ಒಂದು ವೇಳೆ ತಮ್ಮ ಜೀವದ ಬಗ್ಗೆ ಯೋಚನೆ ಮಾಡಿದ್ದರೆ ಅಲ್ಲಿ ದೊಡ್ಡ ಮಟ್ಟದ ದುರಂತವೇ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತ್ಯಕ್ಷ ದರ್ಶಿಗಳು ಇಂತಹ ವಾದವನ್ನು ಮಂಡಿಸುತ್ತಿದ್ದು, ದುರಂತದಲ್ಲಿ ಸಾವನ್ನಪ್ಪಿದ ಪೈಲಟ್ ಗಳಾದ ಸಮಿ ಅಬ್ರಾಲ್ ಮತ್ತು ಸಿದ್ಧಾರ್ಥ್ ನೇಗಿ ತಮ್ಮ ಪ್ರಾಣ ಉಳಿಸಿಕೊಳ್ಳಲು ವಿಮಾನದಿಂದ ಎಮರ್ಜೆನ್ಸಿ ಇಜೆಕ್ಟ್ ಆಗಿದಿದ್ದರೆ ಖಂಡಿತಾ ವಿಮಾನ ಸಮೀಪದ ಜನವಸತಿ ಪ್ರದೇಶದ ಮೇಲೆ ಬಿದ್ದು ದೊಡ್ಡ ಮಟ್ಟದ ಜೀವಹಾನಿಯೇ ಸಂಭವಿಸುತ್ತಿತ್ತು. ಆದರೆ ಪೈಲಟ್ ಗಳಿಬ್ಬರು ವಿಮಾನವನ್ನು ಬೇಕೆಂದೇ ಜನರಹಿತ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪತ್ರಿಕೆಯೊಂದರೊಂದಿಗೆ ಮಾತನಾಡಿರುವ ಹೆಸರು ಹೇಳಲು ಇಚ್ಛಿಸದ ವಾಯುಪಡೆ ಅಧಿಕಾರಿಯೊಬ್ಬರು, 'ವಿಮಾನ ಟೇಕಾಫ್ ಆದ ಬಳಿಕ ಪೈಲಟ್ ಗಳು ಹೊರಬಂದಿದ್ದರೆ (ಎಜೆಕ್ಟ್) ಅವರ ಜೀವ ಉಳಿಯುವ ಸಾಧ್ಯತೆ ಇತ್ತು. ಆದರೆ ವಿಮಾನ ಎಚ್‌ಎಎಲ್ ಕಾಪೌಂಡ್‌ನಿಂದ ಆಚೆ, ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಬೀಳುತ್ತಿತ್ತು. ವಿಮಾನ ರನ್ ವೇಯಲ್ಲಿ ಓಡುತ್ತಿರುವಾಗಲೇ ಟೈರ್ ನಡುಗುತ್ತಾ ಕಳಚಿಕೊಂಡಿತು. ಅದರ ಲೋಹದ ತುದಿ ಅತಿವೇಗದಲ್ಲಿ ರನ್ ವೇ ಉಜ್ಜಿತ್ತು. ಈ ಘರ್ಷಣೆಯಿಂದ ಬೆಂಕಿಯ ಕಿಡಿಗಳು ಹಾರಿದವು. ಇನ್ನೇನು ಟೇಕಾಫ್ ಆಗಬೇಕು ಎನ್ನುವಾಗ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ಸೆಕೆಂಡ್ ಗಳಲ್ಲಿ ಇಷ್ಟೆಲ್ಲಾ ನಡೆದು ಹೋದಾಗ ಪೈಲಟ್ ಗಳು ಅಷ್ಟೇ ತುರ್ತಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಯಿತು’ ಎಂದು ಹೇಳಿದ್ದಾರೆ.
'ವೈಮಾನಿಕ ಸಂಚಾರ ನಿಯಂತ್ರಕರನ್ನು (ಎಟಿಸಿ) ಕೊನೆಯ ಬಾರಿಗೆ ಸಂಪರ್ಕಿಸಿ, ವಿಮಾನವನ್ನು ಹಾರಿಸುವ ನಿರ್ಧಾರ ಕೈಬಿಟ್ಟು ವಿಮಾನದಿಂದ ಎಜೆಕ್ಟ್ ಆದರು (ಹೊರಬಿದ್ದರು). ಸದ್ದು, ಬೆಂಕಿ, ಹೊಗೆ ತುಂಬಿದ್ದ ವಾತಾವರಣದಲ್ಲಿ ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದೇ ಯಾರಿಗೂ ಕೇಳಿಸಲಿಲ್ಲ. ಅವರನ್ನು ಕ್ಷೇಮವಾಗಿ ಇಳಿಸಬೇಕಿದ್ದ ಪ್ಯಾರಾಚೂಟ್ ಗಳು ಸುಟ್ಟುಹೋದವು. ಓರ್ವ ಪೈಲಟ್ ಉರಿಯುತ್ತಿದ್ದ ವಿಮಾನದ ಸನಿಹವೇ ಇಳಿದ ಕಾರಣ ಜೀವಂತ ಸುಟ್ಟುಹೋದ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಹುತಾತ್ಮನಾದ' ಎಂದು ಇಡೀ ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ವಾಯುಪಡೆಯ ಅಧಿಕಾರಿ ಹೇಳಿದ್ದಾರೆ.
ಪೈಲಟ್ ಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ವಿಮಾನವನ್ನು ಟೇಕಾಫ್ ಮಾಡದಿರುವ ತುರ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದ ಪೂರ್ವ ದಿಕ್ಕಿನ ತುದಿಗೆ ತಾಗಿಕೊಂಡಂತೆ ಕರಿಯಮ್ಮನ ಅಗ್ರಹಾರ ಮುಖ್ಯರಸ್ತೆ ಇದೆ. ಟೆಕ್ ಪಾರ್ಕ್‌ ಮತ್ತು ಯಮಲೂರ್‌ ಗ್ರಾಮಗಳಿಗೆ ಹೋಗುವ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚು. ಹಳೇ ಏರ್ ಪೋರ್ಟ್‌ ರಸ್ತೆ, ಮಾರತ್ ಹಳ್ಳಿ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ. ಜನನಿಬಿಡ ಮಂಜುನಾಥ ಲೇಔಟ್ ವಿಮಾನ ಓಡುವ ಏರ್ ಸ್ಟ್ರಿಪ್‌ ತುದಿಗೆ ಕೇವಲ 500 ಮೀಟರ್ ದೂರದಲ್ಲಿದೆ. ಅಲ್ಲದೆ ಸಮೀಪದಲ್ಲೇ ಟ್ರಿನಿಟಿ ಇಂಗ್ಲಿಷ್ ಹೈಸ್ಕೂಲ್, ಕಾವೇರಿ ಜ್ಞಾನಮಿತ್ರ ಶಾಲೆ ಮತ್ತು ಎಂವಿಜೆ ಇಂಟರ್ ನ್ಯಾಷನಲ್ ಸ್ಕೂಲ್ ಗಳು ವಿಮಾನ ಸ್ಫೋಟಗೊಂಡ ಸ್ಥಳಕ್ಕೆ ಕೂಗಳತೆ ದೂರದಲ್ಲಿದೆ. ಔಟರ್‌ ರಿಂಗ್‌ ಮುಂಭಾಗದಲ್ಲಿಯೇ ಚಂದ್ರ ಲೇಔಟ್ ಮತ್ತು ರಾಜಶ್ರೀ ಲೇಔಟ್ ಗಳ ಸಾವಿರಾರು ಮನೆಗಳಿವೆ. ಈ ಪ್ರದೇಶಗಳಲ್ಲಿ ವಿಮಾನ ಪತನವಾಗಿದ್ದರೆ ದೊಡ್ಡ ಮಟ್ಟದಲ್ಲೇ ಅನಾಹುತ ಸಂಭವಿಸಿರುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com