ದೈಹಿಕ ಹಲ್ಲೆ ನಡೆಸಿದರೆ ಪೋಷಕರ ಜೊತೆ ವಾಸಿಸಲು ಅವಕಾಶವಿಲ್ಲ: ಹೈಕೋರ್ಟ್ ಆದೇಶ

ವೃದ್ಧ ಪೋಷಕರ ಮೇಲೆ ಹಲ್ಲೆ ನಡೆಸಿ ಅವರ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೃದ್ಧ ಪೋಷಕರ ಮೇಲೆ ಹಲ್ಲೆ ನಡೆಸಿ ಅವರ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ ಪುತ್ರನಿಗೆ ರಾಜ್ಯ ಹೈಕೋರ್ಟ್ 30 ದಿನಗಳೊಳಗೆ ಮನೆ ಖಾಲಿ ಮಾಡುವಂತೆ ಮತ್ತು ಪೋಷಕರ ಜೀವನ ನಿರ್ವಹಣೆಗೆ ಮಾಸಿಕ 10 ಸಾವಿರ ರೂಪಾಯಿ ನೀಡುತ್ತಿರಬೇಕೆಂದು ಆದೇಶ ನೀಡಿದೆ.

ನಡೆದ ಘಟನೆಯೇನು: ಬೆಂಗಳೂರಿನ ವೈಯಾಲಿಕಾವಲ್ ನ ವೃದ್ಧ ದಂಪತಿಯಾದ 74 ವರ್ಷದ ಪಿ ರಾಜಗೋಪಾಲ್ ಮತ್ತು 71 ವರ್ಷದ ಎ ವಿದ್ಯಾ ಅವರ ಪುತ್ರ 36 ವರ್ಷದ ಸ್ಕಂದ ಶರತ್ ಪೋಷಕರನ್ನು ಕೀಳಾಗಿ ನೋಡಿಕೊಳ್ಳುತ್ತಿದ್ದ. ಅಲ್ಲದೆ ಅವರ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದ.

ಹಿರಿಯ ನಾಗರಿಕರು ಮತ್ತು ಪೋಷಕರ ನಿರ್ವಹಣೆ ಮತ್ತು ಅಭಿವೃದ್ಧಿ ಕಾಯ್ದೆಯಡಿ ನ್ಯಾಯಾಧೀಕರಣದ ನ್ಯಾಯಾಧೀಶ ಅಲೋಕ್ ಅರದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಶರತ್ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿತ್ತು. ಶರತ್ ತಂದೆ ತಾಯಿಗೆ ತಿಂಗಳಿಗೆ 10 ಸಾವಿರ ರೂಪಾಯಿ ನೀಡಬೇಕೆಂದು ಆದೇಶ ನೀಡಿತ್ತು.

ಆದರೆ ತನ್ನ ಪೋಷಕರು ಸರ್ಕಾರಿ ನಿವೃತ್ತ ನೌಕರರಾಗಿದ್ದು ತಿಂಗಳಿಗೆ 70 ಸಾವಿರ ರೂಪಾಯಿ ಪಿಂಚಣಿಯೇ ಬರುತ್ತದೆ. ಅವರಿಗೆ ತಾನು ಏಕೆ ಹಣ ನೀಡಬೇಕು ಮತ್ತು ಅವರ ಮನೆ, ಆಸ್ತಿ ತನಗೆ ಬರಬೇಕೆಂದು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ.

ವೃದ್ಧ ಪೋಷಕರು ಮತ್ತು ಮಗನ ವಾದ ವಿವಾದ ಆಲಿಸಿದ ನ್ಯಾಯಮೂರ್ತಿ, ಸಂಪ್ರದಾಯ ಸಮಾಜವನ್ನು ಹೊಂದಿರುವ ನಮ್ಮ ದೇಶ ಮಾತಾ ಪಿತೃಗಳ ಯೋಗಕ್ಷೇಮವನ್ನು ಮಕ್ಕಳು ನೋಡಿಕೊಳ್ಳಬೇಕೆಂದು ಹೇಳುತ್ತದೆ. ಅಲ್ಲದೆ ಅವರನ್ನು ಗೌರವದಿಂದ ಕಾಣಬೇಕೆಂದು ಬಯಸುತ್ತದೆ. ಆದರೆ ಕಾಲ ಬದಲಾದಂತೆ ನಮ್ಮ ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಕಣ್ಮರೆಯಾಗುತ್ತಿದ್ದು ಅವಿಭಕ್ತ ಕುಟುಂಬ ಹೋಗಿ ವಿಭಕ್ತ ಕುಟುಂಬಗಳು ಹೆಚ್ಚೆಚ್ಚು ಬರುತ್ತಿವೆ. ಹೀಗಾಗಿ ವೃದ್ಧ ಪೋಷಕರು ಒಂಟಿಯಾಗಿ ಇಲ್ಲವೇ ವೃದ್ಧಾಶ್ರಮಗಳಲ್ಲಿ ಬದುಕುವುದು ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಪೋಷಕರ ಮೇಲೆ ಹಲ್ಲೆ ಮಾಡಿದ್ದನ್ನು ಮಗ ಒಪ್ಪಿಕೊಂಡಿದ್ದು ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಪೋಷಕರ ಜೊತೆ ಮನೆಯಲ್ಲಿ ನೆಲೆಸಿದರೆ ಯಾವ ಕ್ಷಣದಲ್ಲಿಯಾದರೂ ಹಲ್ಲೆ ನಡೆಸುವ ಸಾಧ್ಯತೆಯಿರುವುದರಿಂದ ಮನೆ ಬಿಟ್ಟು ಹೋಗುವಂತೆ ಮಗನಿಗೆ ನ್ಯಾಯಾಧೀಶರು ಆದೇಶ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com