ಬೆಂಗಳೂರು ಸುರಕ್ಷಿತ ನಗರ, ಅಸುರಕ್ಷಿತ ಭಾವ ಎಂದಿಗೂ ಕಾಡಿಲ್ಲ: ಕಾಶ್ಮೀರಿ ವಿದ್ಯಾರ್ಥಿಗಳು

ಬೆಂಗಳೂರು ಅತ್ಯಂತ ಸುರಕ್ಷಿತ ನಗರವಾಗಿದ್ದು, ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಕಾಶ್ಮೀರದ ವಿದ್ಯಾರ್ಥಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ  ಕೆಲ ಕಾಶ್ಮೀರಿ  ವಿದ್ಯಾರ್ಥಿಗಳ ಮೇಲೆ ದೇಶ ದ್ರೋಹ ಆರೋಪ ಕೇಳಿಬಂದಿತ್ತು. ಇದರ  ಹೊರತಾಗಿಯೂ ಬೆಂಗಳೂರು ಅತ್ಯಂತ ಸುರಕ್ಷಿತ ನಗರವಾಗಿದ್ದು, ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಕಾಶ್ಮೀರದ ವಿದ್ಯಾರ್ಥಿಗಳು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಸಂದೇಶ ಹಾಕಿದ್ದ ಹಿನ್ನೆಲೆಯಲ್ಲಿ ನಗರದ  ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲ ವಿದ್ಯಾರ್ಥಿಗಳ ಮೇಲೆ  ದೇಶ ದ್ರೋಹ ಪ್ರಕರಣ ದಾಖಲಿಸಲಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅಚಾರ್ಯ ತಂತ್ರಜ್ಞಾನ ಸಂಸ್ಥೆಯ ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ, ಕಳೆದೆರಡು ವರ್ಷಗಳಿಂದ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ಅಸುರಕ್ಷಿತ ಎಂದು ಎಂದಿಗೂ ಅನ್ನಿಸಲಿಲ್ಲ. ಜಮ್ಮು-ಕಾಶ್ಮೀರದಿಂದ 20 ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದೇವೆ. ಕಾಲೇಜ್ ಸಿಬ್ಬಂದಿಯಾಗಲೀ ಅಥವಾ ಸಹಪಾಠಿಗಳಾಗಲೀ ಯಾವುದೇ ರೀತಿಯ  ದ್ವೇಷ ತೋರಿಸುತ್ತಿಲ್ಲ ಎಂದರು.

ಕೆಲ ವಿದ್ಯಾರ್ಥಿಗಳು ದ್ವೇಷ ಹರಡುವ ಉದ್ದೇಶ ಹೊಂದಿದ್ದರೆ ಅದಕ್ಕೆ ಜಮ್ಮು- ಕಾಶ್ಮೀರದ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸುವುದು ಸರಿಯಲ್ಲ, ನಮ್ಮ ಕಾಲೇಜಿನಲ್ಲಿ ಅಂತಹ ಪರಿಸ್ಥಿತಿ ಇಲ್ಲ, ಸಹೋದರ, ಸಹೋದರಿಯರ ರೀತಿಯಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದರು.

ಕಾಶ್ಮೀರದಿಂದ ಬಂದಿರುವ ಬಹುತೇಕ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ವಿಶೇಷ ಸ್ಕಾಲರ್ ಶಿಪ್ ಯೋಜನೆಯಡಿ ಬೆಂಗಳೂರಿನ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಈ ಮಧ್ಯೆ ಕಾಲೇಜಿನ ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕೂಡಾ ಕಾರ್ಯೋನ್ಮುಖವಾಗಿದೆ.
ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅರಿವು ಮೂಡಿಸುವಂತೆ  ಮಾನ್ಯತೆ ಪಡೆದ ಕಾಲೇಜುಗಳ ಪ್ರಿನ್ಸಿಪಾಲರಿಗೆ  ಸೂಚನೆ ನೀಡಲಾಗಿದೆ ಎಂದು ಆಚಾರ್ಯ ಸಂಸ್ಥೆಯ ನಿರ್ದೇಶಕ ಸಿಬಿಎಂ ಭೂಷಣ್ ಹೇಳಿದ್ದಾರೆ.
ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಂಪಸ್ ಆವರಣದಲ್ಲಿ ಶಾಂತಿ ಕಾಪಾಡುವಂತೆ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.
ಕ್ಯಾಂಪಸ್ ಹಾಗೂ ವಿದ್ಯಾರ್ಥಿಗಳನ್ನು ಪ್ರಚೋದಿಸುವಂತಹ ಯಾವುದೇ  ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಸೂಚಿಸಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ಕೆ. ಆರ್. ವೇಣುಗೋಪಾಲ್ ಹೇಳಿದ್ದಾರೆ.
ದೇಶಾದ್ಯಂತ ಸುಮಾರು 3500 ಕ್ಕೂ ಹೆಚ್ಚು ಕಾಶ್ಮೀರಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕರ್ನಾಟಕದಲ್ಲಿ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com