ಬಂಡೀಪುರದಲ್ಲಿ ಭೀಕರ ಕಾಡ್ಗಿಚ್ಚು, ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮ

ಕಳೆದ ಎರಡು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ದಿನೇ ದಿನೇ ಹೆಚ್ಚಾಗುತ್ತಿದ್ದು, ಶನಿವಾರ ಕಾಡ್ಗಿಚ್ಚಿನ ಭೀಕರತೆ ಸ್ವರೂಪ ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಚಾಮರಾಜನಗರ: ಕಳೆದ ಎರಡು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ದಿನೇ ದಿನೇ ಹೆಚ್ಚಾಗುತ್ತಿದ್ದು, ಶನಿವಾರ ಕಾಡ್ಗಿಚ್ಚಿನ ಭೀಕರತೆ ಸ್ವರೂಪ ಪಡೆದುಕೊಂಡಿದೆ.
ಕಾಡಿನಲ್ಲಿ ಕಾಣಿಸಿಕೊಂಡಿರುವ ಬೆಂಕಿಯ ಕೆನ್ನಾಲಿಗೆಗೆ ಈವರೆಗೂ ಬರೊಬ್ಬರಿ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ನಿನ್ನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹಲವು ಕುರುಚಲು ಗುಡ್ಡಗಳನ್ನು ಆಹುತಿ ತೆಗೆದುಕೊಂಡಿದ್ದ ಕಾಳ್ಗಿಚ್ಚು, ಶನಿವಾರ ಹುಲಿ ಸಂರಕ್ಷಿತ ಪ್ರದೇಶಕ್ಕೆ ವ್ಯಾಪಿಸಿದೆ. ಸಾವಿರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರ ನೆರವಿನಿಂದ ಕಾಳ್ಗಿಚ್ಚು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ.  ಗಾಳಿಯ ವೇಗಕ್ಕೆ ಬೆಂಕಿ ತೀವ್ರವಾಗಿ ಪಸರಿಸುತ್ತಿದ್ದು, ಬೇಸಿಗೆಯ ಬಿಸಿಲು ಕೂಡ ಕಾಡ್ಗಿಚ್ಚು ಪಸರಿಸಲು ಕಾರಣವಾಗಿದೆ. ಬೆಂಕಿ ನಿಯಂತ್ರಣಕ್ಕೆ ಬಾರದಿದ್ದರೆ ಕೇರಳ ವ್ಯಾಪ್ತಿಯ ಅರಣ್ಯಕ್ಕೂ ಹರಡುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಇನ್ನು ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟ ವಲಯದ ಕೆಬ್ಬೇಪುರ– ಚೌಡಹಳ್ಳಿ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡು ಬಂದ ಬೆಂಕಿ ಮಗುವಿನಹಳ್ಳಿ ಜಾರ್ಕಲ್ಲು ಕ್ವಾರಿ ಗುಡ್ಡ, ಗುಮ್ಮನಗುಡ್ಡ, ಬಾಳೆತಾರ್ಕೊರೆ ಗುಡ್ಡ, ಗೌರಿ ಕಲ್ಲು ಬೆಟ್ಟದವರೆಗೆ ವ್ಯಾಪಿಸಿದೆ. ಶುಕ್ರವಾರ ಸಂಜೆ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಶನಿವಾರ ಬೆಳಿಗ್ಗೆ ಹೊಗೆಯಾಡುತ್ತಲೇ ಇತ್ತು. ಮಧ್ಯಾಹ್ನ 12ರ ವೇಳೆಗೆ ಮೇಲು ಕಾಮನಹಳ್ಳಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್‌ 66)– ಊಟಿ ರಸ್ತೆ ಉದ್ಯಾನದ ಗೇಟ್‌ ಬಳಿಗೆ ಬೆಂಕಿ ತಲುಪಿತು. ಬೆಂಕಿಯ ಕೆನ್ನಾಲಗೆ ರಾಷ್ಟ್ರೀಯ ಹೆದ್ದಾರಿ ದಾಟಬಾರದು ಎಂಬ ದೃಷ್ಟಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಸಜ್ಜಾಗಿ ನಿಂತಿದ್ದರು. ಬೆಂಕಿ, ಹೆದ್ದಾರಿಗೆ ಸಮೀಪಿಸುತ್ತಲೇ ನೀರು ಸುರಿದು ನಂದಿಸಲು ಯತ್ನಿಸಿದರು. ಆದರೆ, ಕಿಡಿಯೊಂದು ಕಣ್ಣು ಮುಚ್ಚಿ ತೆರೆಯುವುದರ ಒಳಗಾಗಿ ಹೆದ್ದಾರಿಯ ಮತ್ತೊಂದು ಭಾಗದಲ್ಲಿರುವ (ಬಲ ಭಾಗ) ಬೋಳುಗುಡ್ಡ ಪ್ರದೇಶಕ್ಕೆ ತಗುಲಿತು.
ಈ ಭಾಗ ದಟ್ಟವಾದ ಅರಣ್ಯ ಪ್ರದೇಶವಾಗಿದ್ದು, ಬೃಹತ್ ಮರಗಳು ಇವೆ. ವನ್ಯಪ್ರಾಣಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ‌ವೆ. ಹಾಗಾಗಿ, ಇಲ್ಲಿ ಅಧಿಕ ಪ್ರಮಾಣದಲ್ಲಿ ಹಾನಿ ಸಂಭವಿಸಬಹುದು ಎಂಬ ಆತಂಕದಲ್ಲಿ ಅಧಿಕಾರಿಗಳಿದ್ದಾರೆ. ಬೋಳುಗಡ್ಡೆ ಪ್ರದೇಶದಲ್ಲಿ ಹುಲಿಕಟ್ಟೆ ಎಂಬ ಪ್ರದೇಶವಿದ್ದು, ಅಲ್ಲಿ ಬೆಂಕಿ ನಿಯಂತ್ರಿಸಲು ಅವಕಾಶ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಶನಿವಾರ ಸಂಜೆಯ ಹೊತ್ತಿಗೆ ಕಾಳ್ಗಿಚ್ಚು ಆ ಪ್ರದೇಶವನ್ನೂ ದಾಟಿ ಮುಂದೆ ಸಾಗಿದೆ. ವನ್ಯಜೀವಿಗಳ ಜೀವ ಹಾನಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ 100 ಮೀಟರ್‌ ದೂರದಲ್ಲಿದ್ದವರಿಗೂ ಅದರ ಕಾವು ಅನುಭವಕ್ಕೆ ಬರುತ್ತಿತ್ತು.
ನಾಗರಹೊಳೆ ಉದ್ಯಾನದ ಸೊಳ್ಳೇಪುರ ಬಳಿ ಕಾಡ್ಗಿಚ್ಚಿಗೆ 35 ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಚಾಮರಾಜನಗರ ಸಮೀಪದ ಕರಿವರದರಾಜನ ಬೆಟ್ಟ, ಯಡಬೆಟ್ಟ ಹಾಗೂ ಅಮಚವಾಡಿ ಸಮೀಪದ ಎಣ್ಣೆಹೊಳೆ ಬೆಟ್ಟಗಳಲ್ಲೂ ಶನಿವಾರ ಕಾಳ್ಗಿಚ್ಚು ಕಾಣಿಸಿಕೊಂಡು, ಸುಮಾರು 200ಕ್ಕೂ ಹೆಚ್ಚು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಮೇಲುಕಾಮನಹಳ್ಳಿ ಬಳಿ ಹೆಚ್ಚು ಸಿಬ್ಬಂದಿ ಇರಲಿಲ್ಲ. ಸ್ವಯಂಸೇವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಯುವಕರನ್ನು ಕೂಡ ಕಾರ್ಯಾಚರಣೆಗೆ ಬಳಸಲಾಯಿತು.  ಗೋಪಾಲಸ್ವಾಮಿ ವಲಯದ ಮಗುವಿನಳ್ಳಿ ಗುಡ್ಡದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿಯನ್ನು ಆರಿಸಲು ಅವಕಾಶ ಇತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಆ ಬಗ್ಗೆ ಗಮನ ಹರಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಗುಡ್ಡದಿಂದಲೇ ಬಂದ ಬೆಂಕಿ ಸಂರಕ್ಷಿತ ಅರಣ್ಯ ಪ್ರದೇಶ ಪ್ರವೇಶಿಸಿದೆ ಎನ್ನಲಾಗಿದೆ.
ಕಾಳ್ಗಿಚ್ಚು ತೀವ್ರವಾಗುತ್ತಲೇ ಮುಂಜಾಗ್ರತಾ ಕ್ರಮವಾಗಿ ಮೇಲುಕಾಮನಹಳ್ಳಿಯಲ್ಲಿರುವ ರಾಷ್ಟ್ರೀಯ ಉದ್ಯಾನದ ಗೇಟ್‌ಅನ್ನು 2 ಗಂಟೆಗಳ ಕಾಲ ಬಂದ್‌ ಮಾಡಲಾಯಿತು. ತಮಿಳುನಾಡಿನತ್ತ ಹೊರಟಿದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು.  ಗೋಪಾಲಸ್ವಾಮಿ ಬೆಟ್ಟವೂ ಭಸ್ಮ: ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲೂ ಕಾಣಿಸಿಕೊಂಡ ಕಾಳ್ಗಿಚ್ಚು ರಾತ್ರಿ ಇಡೀ ಉರಿದು ಬೆಟ್ಟದಲ್ಲಿದ್ದ ಗಿಡಮರಗಳನ್ನು ಆಹುತಿ ತೆಗೆದುಕೊಂಡಿದೆ. ಬೆಳಿಗ್ಗೆ 8.30ರ ಸುಮಾರಿಗೆ ನಿಯಂತ್ರಣಕ್ಕೆ ತರಲಾಯಿತು. ಗೋಪಾಲಸ್ವಾಮಿ ದೇವಾಲಯದ ಹಿಂಭಾಗದ ಪ್ರದೇಶದ ವನಸಿರಿಯೂ ಸುಟ್ಟು ಹೋಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com