ಬೆಂಗಳೂರು: ಕಾಲಿಗೆ ಗುಂಡು ಹಾರಿಸಿ ರೌಡಿ ಶಶಾಂಕ್‌ ಬಂಧನ

ಸಾಫ್ಟ್‌ವೇರ್ ಉದ್ಯೋಗಿಗಳನ್ನು ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶಶಾಂಕ್ ಎಂಬಾತನ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಅತ್ತಿಬೆಲೆ ಪೊಲೀಸರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಸಾಫ್ಟ್‌ವೇರ್ ಉದ್ಯೋಗಿಗಳನ್ನು ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶಶಾಂಕ್ ಎಂಬಾತನ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಂಡೇಟು ತಗುಲಿರುವ ಬನಶಂಕರಿಯ ಶಶಾಂಕ್ (24) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ರೌಡಿ ಶಶಾಂಕ್‌ ನಡೆಸಿದ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಎರಡು ಕೊಲೆ, ಸುಲಿಗೆ, ಕೊಲೆಯತ್ನ ಸೇರಿದಂತೆ, ಆರಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಶಶಾಂಕ್, ನಿನ್ನೆರಾತ್ರಿ 11.50ರ ಸುಮಾರಿಗೆ ಹೊಂಡಾ ಡಿಯೋ ಸ್ಕೂಟರ್‌ನಲ್ಲಿ ಅತ್ತಿಬೆಲೆಯ ಟಿವಿಎಸ್ ರಸ್ತೆಯಲ್ಲಿ ಹೋಗುತ್ತಿದ್ದ ಮಾಹಿತಿ ಪಡೆದ ಅತ್ತಿಬೆಲೆ ಸರ್ಕಲ್ ಇನ್ಸ್‌ಪೆಕ್ಟರ್ ಬಾಲಾಜಿ, ಮತ್ತವರ ತಂಡ, ಶಶಾಂಕ್‌ನ ಸ್ಕೂಟರ್ ಅಡ್ಡಗಟ್ಟಿ ತಪಾಸಣೆಗೆ ಮುಂದಾದಾಗ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೇದೆ ಪ್ರಕಾಶ್‌ಗೆ ರೇಜರ್‌ನಿಂದ ಎಡಭುಜಕ್ಕೆ ಹಲ್ಲೆ ನಡೆಸಿದ್ದಾನೆ.
ಕೂಡಲೇ ಬಾಲಾಜಿ ಅವರು, ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಇದನ್ನು ನಿರ್ಲಕ್ಷಿಸಿದ ರೌಡಿ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಗುಂಡು ಹಾರಿಸಿದ್ದು, ಅದು ಬಲಗಾಲಿನ ಮೊಣಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.
ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಶಾಂಕ್ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸೆಪೆಟ್ ತಿಳಿಸಿದ್ದಾರೆ.
ಶಶಾಂಕ್ ಕೊಲೆ, ಸುಲಿಗೆ, ಬೆದರಿಕೆ, ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಎಂದು ಅವರು ತಿಳಿಸಿದ್ದಾರೆ.
ಆ್ಯಕ್ಸಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕಿನ್ ಕಾರ್ ಕುಮಾರ್ ಠಾಕೂರ್ (34) ಅವರು, ಕಳೆದ ಮೇ 13ರ ರಾತ್ರಿ 11.45ರ ವೇಳೆ ಕೆಲಸ ಮುಗಿಸಿಕೊಂಡು ಮೇಡಹಳ್ಳಿಯ ಶುಭ ಅಪಾರ್ಟ್‌ಮೆಂಟ್‌ನ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಶಶಾಂಕ್ ಮತ್ತು ತಂಡ ಅಡ್ಡಗಟ್ಟಿ ಚಾಕುವಿನಿಂದ ಮುಖ ಹಾಗೂ ಬೆನ್ನಿಗೆ ಹಲ್ಲೆ ನಡೆಸಿ, ನಾಲ್ಕೂವರೆ ಸಾವಿರ ರೂ. ನಗದು, ಮೊಬೈಲ್, ಚಿನ್ನದ ಸರ, ಉಂಗುರ ಕಸಿದು ಪರಾರಿಯಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಅತ್ತಿಬೆಲೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಶಶಾಂಕ್‌ನ ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com