ಅಯೋಧ್ಯೆ ತೀರ್ಪು: ರಾಜಧಾನಿ ಬೆಂಗಳೂರು ಸಂಪೂರ್ಣ ಶಾಂತ 

ಅಯೋಧ್ಯೆ ರಾಮಜನ್ಮಭೂಮಿ ವಿವಾದ ತೀರ್ಪು ಹಿನ್ನಲೆಯಲ್ಲಿ 2ನೇ ಶನಿವಾರ ಸರ್ಕಾರ ರಜೆ, ಶಾಲಾಕಾಲೇಜುಗಳಿಗೆ ರಜೆ ಘೋಷಣೆ, ಪೊಲೀಸರು 144 ವಿಧಿ ಜಾರಿ ಮಾಡಿದ್ದ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಸಂಪೂರ್ಣವಾಗಿ ಶಾಂತವಾಗಿತ್ತು. ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ ವಿವಾದ ತೀರ್ಪು ಹಿನ್ನಲೆಯಲ್ಲಿ 2ನೇ ಶನಿವಾರ ಸರ್ಕಾರ ರಜೆ, ಶಾಲಾಕಾಲೇಜುಗಳಿಗೆ ರಜೆ ಘೋಷಣೆ, ಪೊಲೀಸರು 144 ವಿಧಿ ಜಾರಿ ಮಾಡಿದ್ದ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಸಂಪೂರ್ಣವಾಗಿ ಶಾಂತವಾಗಿತ್ತು. ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. 

ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನೀಡಲಿರುವೋ ತೀರ್ಪಿನ ಬಗ್ಗೆ ತಿಳಿದುಕೊಳ್ಳಲು ಜನರು ಬೆಳಿಗ್ಗೆಯಿಂದಲೇ ಮನೆಗಳಲ್ಲಿ ಟಿವಿ ಮುಂದೆ ಕುಳಿತಿದ್ದರು. ಹೀಗಾಗಿ ಮಾರುಕಟ್ಟೆ, ಬಸ್ ನಿಲ್ದಾಣ, ಸಿನಿಮಾ ಮಂದಿರ, ಮಾಲ್ ಮುಂತಾದವುಗಳಲ್ಲಿ ಜನದಟ್ಟಣೆ ಕಂಡು ಬರಲಿಲ್ಲ. ತೀರ್ಪು ಬಂದ ಬಳಿಯ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ಹಿನ್ನಲೆಯಲ್ಲಿ ಮಧ್ಯಾಹ್ನದ ಬಳಿಕ ಜನರ ಓಡಾಟ ತುಸು ಹೆಚ್ಚಾಗಿ ಕಂಡು ಬಂದಿತ್ತು. 

ನಗರದ ಪ್ರಮುಖ ನಿಲ್ದಾಣಗಳಾದ ಮೆಜೆಸ್ಟಿಕ್, ಶಾಂತಿನಗರ, ಯಶವಂತಪುರ, ಯಲಹಂಕ, ಮೈಸೂರು ರಸ್ತೆ ಸ್ಯಾಟ್'ಲೈಟ್ ಬಸ್ ನಿಲ್ದಾಣ ಮತ್ತು ಕೆಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕಂಟೋನ್ಮೆಂಟ್ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಎಂದಿಗಿಂತ ಇಂದು ವಿರಳವಾಗಿ ಕಂಡು ಬಂತು. 

ಪ್ರತಿ ಶನಿವಾರ ಮಧ್ಯಾಹ್ನದ ಸಂಚಾರ ದಟ್ಟಣೆಯಿಂದ ಕೂಡಿರುವ ನಗರದ ಪ್ರಮುಖ ರಸ್ತೆಗಳಾದ ಎಂ.ಜಿ.ರಸ್ತೆ, ಕೆ.ಜಿ.ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ, ತುಮಕೂರು, ಬಳ್ಳಾರಿ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮಯಾಗಿತ್ತು. ಸದಾ ಗಿಜಿಗುಡುತ್ತಿದ್ದ ನಗರದ ಪ್ರಮುಖ ಚಿತ್ರಮಂದಿರಗಳು, ಮಾಲ್ ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಕಾಣಿಸಲಿಲ್ಲ. 

ಇನ್ನು ಮೆಟ್ರೋದಲ್ಲಿ ಕೂಡ ಪ್ರಯಾಣಿಕರ ದಟ್ಟಣೆ ಹೆಚ್ಚಿರಲಿಲ್ಲ. ಸಾಮಾನ್ಯವಾಗಿ ರಜೆಯ ಸಂದರ್ಭದಲ್ಲಿ ಜನರ ಓಡಾಟ ತುಸು ಹೆಚ್ಚಿರುತ್ತದೆ. ಆದರೆ, ಶನಿವಾರ ಮಧ್ಯಾಹ್ನದವರೆಗೆ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಕಂಡು ಬಂದಿತು. ತೀರ್ಪು ಬಂದ ಬಳಿಕ ಯಾವುದೇ ತರಹದ ಅಹಿತಕರ ಘಟನೆ ನಡೆದಿಲ್ಲ ಎಂಬ ಮಾಹಿತಿ ತಿಳಿದುಬರುತ್ತಿದ್ದಂತೆ ಸಂಜೆ ನಂತರ ಜನರು ಮೆಟ್ರೋದಲ್ಲಿ ಓಡಾಡಲು ಆರಂಭಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com