ಕೊನೆಗೂ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ: ಬಿಎಸ್'ವೈ ಸರ್ಕಾರ ನಿರಾಳ

ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಬಾರದೆ ಇಕ್ಕಟ್ಟು ಅಧಿವೇಶನ ಎದುರಿಸುವ ಚಿಂತೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಕೊನೆಗೂ ಕೊಂಚ ನಿರಾಳ ಸಿಕ್ಕಂತಾಗಿದೆ. 
ಯಡಿಯೂರಪ್ಪ
ಯಡಿಯೂರಪ್ಪ
Updated on

ಬೆಂಗಳೂರು: ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಬಾರದೆ ಇಕ್ಕಟ್ಟು ಅಧಿವೇಶನ ಎದುರಿಸುವ ಚಿಂತೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಕೊನೆಗೂ ಕೊಂಚ ನಿರಾಳ ಸಿಕ್ಕಂತಾಗಿದೆ. 

ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರಷ್ಟೇ ಅಲ್ಲದೆ, ಸ್ವಪಕ್ಷೀಯರೂ ಕೂಡ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರಕ್ಕಾಗಿ ಮುಂಗಡವಾಗಿ ರೂ.1,200 ಕೋಟಿ ಪರಿಹಾರ ಬಿಡುಗಡೆ ಮಾಡಿರುವುದರಿಂದ ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರ ತುಸು ನಿಟ್ಟಿಸಿರು ಬಿಟ್ಟಿದೆ.

ಇದೇ ತಿಂಗಳ 10 ರಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮದೇ ರೀತಿಯಲ್ಲಿ ರಣತಂತ್ರ ರೂಪಿಸುವಲ್ಲಿ ನಿರತವಾಗಿದ್ದವು. ಅಧಿವೇಶನ ಹೇಗೆ ಎದುರಿಸುವುದು ಎಂಬ ಚಿಂತೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ಇದೀಗ ಕೊಂಚ ನಿರಾಳವುಂಟಾಗಿದೆ. ಪ್ರತಿಪಕ್ಷಗಳನ್ನು ಸಮರ್ಥವಾಗಿಯೇ ಎದುರಿಸಲು ಯಡಿಯೂರಪ್ಪ ಸಜ್ಜಾಗುತ್ತಿದ್ದಾರೆ. 

ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ನೆರೆ ಪರಿಹಾರ ಬಿಡುಗಡೆ ಬಗ್ಗೆಯೇ ಪರ ಹಾಗೂ ವಿರೋಧದ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು, ವಾದ-ಪ್ರತಿವಾದಗಳು ಕೇಳಿಬರುತ್ತಿದ್ದವು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಅಸ್ತಿತ್ವದಲ್ಲಿ ಇರದೇ ಇದ್ದಿದ್ದರೆ, ಈ ಚರ್ಚೆ ತಾರಕ್ಕೇರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತಿರುವುದರಿಂದ ಸಹಜವಾಗಿಯೇ ಜನರು ತಕ್ಷಣ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಹೊಂದಿದ್ದರು. ಆದರೆ, ಯಾವಾಗ ಆ ನಿರೀಕ್ಷೆ ಹುಸಿಯಾಗತೊಡಗಿತೋ ಜನರ ಸಹನೆಯ ಕಟ್ಟೆಯೊಡಯಲಾರಂಭಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವರ ವಿರುದ್ಧ ಟೀಕೆಗಳ ಸುರಿಮಳೆಯೇ ಆರಂಭವಾಗಿತ್ತು. 

ಇನ್ನು ಬಿಜೆಪಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಅಕ್ಷರಶಃ ಅತ್ತ ದರಿ ಇತ್ತ ಪುಲಿ ಎಂಬಂತಹ ಸನ್ನಿವೇಶ ಎದುರಾಗಿತ್ತು. ನೆರೆ ಪರಿಹಾರ ನೀಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರುವಂತಿಲ್ಲ. ಪರಿಹಾರ ನೀಡದಿರುವುದನ್ು ಜನರ ಬಳಿ ಸಮರ್ಥಿಸಿಕೊಳ್ಳುವಂತೆಯೂ ಇರಲಿಲ್ಲ. ಯಡಿಯೂರಪ್ಪ ಅವರು ಇನ್ನೆರಡು ದಿನಗಳಲ್ಲಿ ಕೇಂದ್ರ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ಹೇಳಿಕೆಗಳನ್ನು ಕಳೆದ ಹಲವು ದಿನಗಳಿಂದ ಪುನರುಚ್ಛರಿಸಿ ಸುಸ್ತಾಗಿದ್ದರು. ಕೊನೆಗೆ ಯಡಿಯೂರಪ್ಪ ಅವರ ಹೇಳಿಕೆಯನ್ನೂ ಜನರು ಲೇವಡಿ ಮಾಡುವ ಹಂತವೂ ತಲುಪಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com