ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಹತ್ಯೆ: 1 ಕೋಟಿಗೆ ಸುಪಾರಿ, ಇಬ್ಬರ ಬಂಧನ

ಅಲಯನ್ಸ್ ವಿಶ್ವವಿದ್ಯಾಲಯ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಅಯ್ಯಪ್ಪ ದೊರೆ
ಅಯ್ಯಪ್ಪ ದೊರೆ

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟಿಎಂ ಲೇಔಟ್‌ನ ಸುಧೀರ್ ಅಂಗೂರ್ (57) ಕೃತ್ಯದ ಸೂತ್ರಧಾರನಾಗಿದ್ದು, ಅಲಯನ್ಸ್  ವಿವಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ಜೆ.ಸಿ. ನಗರದ ಸೂರಜ್ ಸಿಂಗ್ (29) ಬಂಧಿತ  ಆರೋಪಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನು ನಾಲ್ವರ ಬಂಧನಕ್ಕೆ ಶೋಧ  ನಡೆಸಲಾಗಿದೆ ಎಂದು ತಿಳಿಸಿದರು.
 
ಪ್ರಕರಣದ ತನಿಖೆ ಹಂತದಲ್ಲಿ 3 ತಂಡವನ್ನು ರಚಿಸಲಾಗಿದ್ದು, ನಂತರದಲ್ಲಿ 8 ತಂಡ ರಚಿಸಲಾಯಿತು. ಸುಧೀರ್ ಅಂಗೂರ್ ಅವರನ್ನು ವಿಚಾರಣೆಗೊಳಪಡಿಸಿದಾಗ, ಸೂರಜ್ ಸಿಂಗ್ ಪಾತ್ರದ ಬಗ್ಗೆ ಗೊತ್ತಾಯಿತು. ಕೊಲೆಯಾದ ಅಯ್ಯಪ್ಪ ದೊರೆ, ಮಧುಕರ್ ಅಂಗೂರ್​ ಎಂಬುವವರಿಗೆ ಕಾನೂನಾತ್ಮಕವಾಗಿ ಸಹಾಯ ಮಾಡಿದ್ದು, ಇದು ಕೂಡ ಈ ಕೊಲೆಗೆ ಒಂದು ಕಾರಣವಾಗಿದೆ ಎಂದು ತಿಳಿಸಿದರು.
 ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸೂರಜ್​, ಕ್ರಮೇಣ ಸುಧೀರ್ ಅಂಗೂರ್​ಗೆ ತುಂಬಾ ಹತ್ತಿರವಾಗಿದ್ದರು. ಹೀಗಾಗಿ ಸೂರಜ್​ಗೆ ಅಯ್ಯಪ್ಪನ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಹೇಳಿದ್ದರು. ಪ್ರತಿ ದಿನ ಅಯ್ಯಪ್ಪ ಅವರ ಚಲನವಲನದ ಬಗ್ಗೆ ಸೂರಜ್​ ಮಾಹಿತಿ ಪಡೆಯುತ್ತಿದ್ದ. ಕೊಲೆಯಾದ ರಾತ್ರಿ ಊಟ ಮಾಡಿ ಮೈದಾನದಲ್ಲಿ ಓಡಾಡುವ ವೇಳೆ ಅಯ್ಯಪ್ಪ ಅವರ ಮೇಲೆ ದಾಳಿ ನಡೆಸಿದ್ದಾರೆ. ಅಯ್ಯಪ್ಪ ಅವರ ದೇಹದ 17 ಕಡೆಗಳಲ್ಲಿ ಗಾಯಗಳಾಗಿತ್ತು ಎಂದು ಭಾಸ್ಕರ್​ ರಾವ್​ ಹೇಳಿದರು.

ಅಯ್ಯಪ್ಪರನ್ನು ಕೊಲೆ ಮಾಡಲು ತಲಾ 20 ಲಕ್ಷ ರೂ. ಸುಪಾರಿ ನೀಡಿದ್ದು, ಒಟ್ಟು 1 ಕೋಟಿ ರೂ ಹೆಚ್ಚು ಹಣ  ಖರ್ಚು ಮಾಡಲಾಗಿದೆ. ಒಟ್ಟು 6 ಜನರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು.  ಅಯ್ಯಪ್ಪ ಅಲ್ಲದೆ, ಮಧುಕರ್ ಅಂಗೂರ್ ಮೇಲೆಯೂ ದಾಳಿ ಮಾಡುವ ಯೋಚನೆಯಲ್ಲಿದ್ದರು. ಅವರಿಗೆಲ್ಲ ಹಿರಿಯ ವಕೀಲರೊಬ್ಬರು ಮಾರ್ಗದರ್ಶನ ನೀಡುತ್ತಿದ್ದುದರ ಬಗ್ಗೆ ಗುಮಾನಿ ಇದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಅಲ್ಲದೆ, ಅಲಯನ್ಸ್ ವಿವಿ ವಿರುದ್ಧ 25 ಕ್ಕೂ ಹೆಚ್ಚು ಸಿವಿಲ್ ಪ್ರಕರಣಗಳಿವೆ.  ಸದ್ಯ ಸೂರಜ್ ಹಾಗೂ ಸುಧೀರ್ ಅಂಗೂರ್​ರನ್ನು ಬಂಧಿಸಿದ್ದೇವೆ. ಸದ್ಯ ಈ ಪ್ರಕರಣದಲ್ಲಿ 24 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. 

ನಾಲ್ವರಿಗೆ ಶೋಧ: ಸೂರಜ್‌ಸಿಂಗ್ ಜೆಸಿ ನಗರದಲ್ಲಿ ಸಕ್ರಿಯನಾಗಿದ್ದು, ಇತ್ತೀಚೆಗೆ  ನಡೆದ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ. ಇಲ್ಲಿಯವರೆಗೆ ಈತನ ಮೇಲೆ ಯಾವುದೇ ಅಪರಾಧ  ಕೃತ್ಯಗಳು ದಾಖಲಾಗಿಲ್ಲ. ಈತನ ಜತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ನಾಲ್ವರು  ಬೆಂಗಳೂರಿನವರೇ ಆಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದರು. ಅಯ್ಯಪ್ಪದೊರೆ  ಕೊಲೆ ಪ್ರಕರಣವು ಸಾರ್ವಜನಿಕರಲ್ಲಿ ಆತಂಕವುಂಟು ಮಾಡಿದ್ದು, ಪ್ರಕರಣವನ್ನು ಭೇದಿಸಲು  ಶಶಿಕುಮಾರ್ ಅವರ ನೇತೃತ್ವದಲ್ಲಿ ಮೂವರು ಎಸಿಪಿಗಳು, ಸಿಸಿಬಿ ಘಟಕದ ಅಧಿಕಾರಿಗಳೂ  ಸೇರಿದಂತೆ 8 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಂಡಗಳು ನಿನ್ನೆ ಬೆಳಿಗ್ಗೆ 6 ರಿಂದ  ರಾತ್ರಿ 11ರವರೆಗೆ ಸತತ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ಗಂಟೆಗೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ನಗರದಲ್ಲಿ ಭಯ-ಭೀತಿವುಂಟು  ಮಾಡುವಂತೆ ನಡೆದಿದ್ದ ಶಿಕ್ಷಣ ತಜ್ಞ ಡಾ. ಅಯ್ಯಪ್ಪದೊರೆ ಅವರ ಕೊಲೆ ಕೃತ್ಯವನ್ನು 24  ಗಂಟೆಯೊಳಗೆ ಭೇದಿಸಿದ ಡಿಸಿಪಿ ಶಶಿಕುಮಾರ್ ನೇತೃತ್ವದ ಪೊಲೀಸ್ ತಂಡವನ್ನು ಮುಖ್ಯಮಂತ್ರಿ  ಯಡಿಯೂರಪ್ಪ ಅವರು ಅಭಿನಂದಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ಲೀಲಮಣಿ ರಾಜು ಅವರು ಕೂಡ ತಂಡಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಸೂಕ್ತ  ಬಹುಮಾನ ನೀಡಲು ಮುಂದಾಗಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದರು. ಅಯ್ಯಪ್ಪದೊರೆ  ಕೊಲೆ ಕೃತ್ಯವನ್ನು ಬೇಧಿಸಿದ ಡಿಸಿಪಿ ಶಶಿಕುಮಾರ್ ನೇತೃತ್ವದ ಪೊಲೀಸ್ ತಂಡಗಳಿಗೆ 1  ಲಕ್ಷ ನಗದು ಬಹುಮಾನವನ್ನು ಭಾಸ್ಕರ್‌ರಾವ್ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com