

ಚಾಮರಾಜನಗರ: ತೋಳ ಬಂತು ತೋಳ ಕಥೆ ಕೇಳ್ತಾ ಇದ್ವಿ ಅಂದು, ಈಗ ಹುಲಿ ಬಂತು ಹುಲಿ ಅಂತ ಕಥೆ ಕೇಳುತ್ತಿದ್ದಂತೆ ಓಡೋಗ್ತಾ ಇದ್ದಾರೆ ಆ ಜನ.
ನಿದ್ರೆಯಲ್ಲೂ ಕನವರಿಸ್ತಾ ಇದ್ದಾರೆ ಹುಲಿ ಬಂತು ಹುಲಿ, ಹಿಡೀರಿ ಹೊಡೀರಿ… ಅಲ್ಲೋಯ್ತು ಇಲ್ಲೋಯ್ತು ಅಂತ. ಹುಲಿ ಉಪಟಳದಿಂದ ಬೇಸತ್ತ ಜನ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಆಯ್ತು. ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದು ಆಯ್ತು. ನರಭಕ್ಷಕ ಹುಲಿಯನ್ನ ಸೆರೆ ಹಿಡಿಯಲು ಐದು ದಿನ ಬೇಕಾಯ್ತು. ಈಗ ಮತ್ತೆ ಹುಲಿ ಬಂತು ಎನ್ನುತ್ತಿದ್ದಾರೆ ಜನ.
ಗಡಿ ಜಿಲ್ಲೆ ಚಾಮರಾಜನಗರದ ರಾಷ್ಟ್ರೀಯ ಉದ್ಯಾನವನ ಅರಣ್ಯ ಪ್ರದೇಶ ಬಂಡೀಪುರ. ನಾಲ್ಕು ಸಾವಿರ ಚದರ ಕಿಲೋಮೀಟರ್ ಇರುವ ಬಂಡೀಪುರ ಕಾಡಿನಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಬಂಡೀಪುರ ಒಂದರಲ್ಲೇ ಕಳೆದ ವರ್ಷ 139 ಹುಲಿಗಳಿದ್ದವು, ಈ ವರ್ಷ ಹುಲಿ ಗಣತಿಯಾಗಿಲ್ಲವಾದರೂ ಅದರ ಸಂಖ್ಯೆ 145 ದಾಟಿದೆ ಎನ್ನುವುದು. ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಪ್ರದೇಶಗಳಲ್ಲಿ ಬಂಡಿಪುರ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಒಂದೇ ಜಿಲ್ಲೆಯಲ್ಲಿ 2 ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿರುವುದು ಈ ಜಿಲ್ಲೆಯಲ್ಲಿ ಮಾತ್ರ.
ಒಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನವಾದರೆ, ಮತ್ತೊಂದು ಬಿಳಿಗಿರಿ ರಂಗನ ಬೆಟ್ಟ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ, ಮತ್ತೊಂದು ಮಹದೇಶ್ವರ ಬೆಟ್ಟದ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಆದೇಶ ಹೊರಬೀಳಬೇಕಾಗಿದೆ ಒಂದು ಅಂದಾಜಿನ ಪ್ರಕಾರ ಬಂಡೀಪುರದಲ್ಲಿ 145, ಬಿ ಆರ್ ಟಿಯಲ್ಲಿ 37, ಮಹದೇಶ್ವರ ಅರಣ್ಯ ಪ್ರದೇಶದಲ್ಲಿ 17 ಹುಲಿಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಬಂಡೀಪುರ ಅರಣ್ಯ ಪ್ರದೇಶದ ಸುತ್ತಮುತ್ತಲಿನಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಸಾಕಷ್ಟು ಶ್ರಮ ಹಾಕುತ್ತಿದೆ. ಆದರೂ ಹುಲಿಗಳ ಉಪಟಳದಿಂದ ಜನರಲ್ಲಿನ ಆತಂಕ ದೂರ ಮಾಡಲು ಸಾಧ್ಯವಾಗಿಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ ಬಂಡೀಪುರ ಅರಣ್ಯ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ವಲಯಗಳಲ್ಲಿ ಹುಲಿ ದಾಳಿಗಳು ಹೆಚ್ಚಾಗಿ ಜನರಿಗೆ ಭೀತಿ ಹುಟ್ಟಿಸಿದವು ಈಗ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡರೆ ಸಾಕು ಜನರು ಬೆಚ್ಚಿ ಬೀಳುತ್ತಾರೆ.
-ವರದಿ: ನಂದೀಶ್