ಹೊಸ ಟಿವಿ ಕದ್ದು, ಮಾರಾಟ ಮಾಡಲೇತ್ನಿಸುತ್ತಿದ್ದ ಆರೋಪಿ ಬಂಧನ: 20 ಎಲ್ಇಡಿ ಟಿವಿ ವಶ
ಬೆಂಗಳೂರು: ಹೊಸದಾಗಿ ಆರಂಭಿಸಲಾಗುತ್ತಿದ್ದ ಟಿವಿ ಶೋರೂಂಗೆ ಕೆಲಸಕ್ಕೆ ಬಂದು 3 ಲಕ್ಷ ರೂ ಮೌಲ್ಯದ 20 ಎಲ್ ಇಡಿ ಟಿವಿಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಬಡಗಿಯೋರ್ವನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ರಾಜಸ್ತಾನದ ನಾಗೋರ್ ಮೂಲದ 22 ವರ್ಷದ ದೇವರಾಮ್ ಜಾಟ್ ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿದ್ದ ನರೇಂದ್ರ ಸೇರಿ ಮತ್ತಿಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಂಡೇಪಾಳ್ಯದ ಚಂದಾಪುರದಲ್ಲಿ ದುರ್ಗಾರಾಂ ಎಂಬುವವರು ಥಾಮ್ಸನ್ ಕಂಪನಿಯ ಹೊಸ ಶೋ ರೂಂ ಪೀಠೋಪಕರಣಗಳನ್ನು ತಯಾರಿಸಲು ದೇವರಾಮ್ ನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆ ಕೆಲಸ ಮುಗಿಯುತ್ತಿದ್ದಂತೆ ಹೊಸ ಟಿವಿಗಳನ್ನು ಅದೇ ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದರು.
ಪೀಠೋಪಕರಣ ತಯಾರಿಸಲು ಬಂದಿದ್ದ ಆರೋಪಿ, ಹೊಂಚು ಹಾಕಿ 20 ಟಿವಿಗಳನ್ನು ಕದ್ದು, ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಿದ್ದ ಬಾಡಿಗೆ ಮನೆಯಲ್ಲಿ ತಂದಿಟ್ಟಿದ್ದ. ಈ ಟಿವಿಗಳನ್ನು ಬಂಡೇಪಾಳ್ಯದಿಂದ ಚಂದಾಪುರಕ್ಕೆ ಸಾಗಿಸುವಾಗ, ಮಾರ್ಗ ಮಧ್ಯದಲ್ಲಿ ಅವುಗಳನ್ನು ಮಾರಾಟ ಮಾಡಲು ಮುಂದಾದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ 3.66 ಲಕ್ಷ ರೂ ಬೆಲೆಬಾಳುವ 20 ಥಾಮ್ಸನ್ ಕಂಪನಿಯ ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತೆ ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ