ಕರ್ನಾಟಕದಾದ್ಯಂತ ಮೂರು ದಿನ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮೂರು ದಿನಗಳು ಅಕಾಲಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮೂರು ದಿನಗಳು ಅಕಾಲಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುಡುಗುಸಹಿತ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ನಾಳೆ ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣಾ ಮತದಾನದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ತಮಿಳುನಾಡು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಇಂದು ಸಂಜೆ ಮಳೆ ಸುರಿದಿದ್ದು, ರಾಜ್ಯದ  ನಾನಾ ಜಿಲ್ಲೆಗಳಲ್ಲಿಯೂ ಮಳೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಮಧ್ಯಾಹ್ನದ ವೇಳೆಯಲ್ಲಿ ಆನೇಕಲ್ ತಾಲೂಕಿನ  ಅತ್ತಿಬೆಲೆ, ಚಂದಾಪುರ ಮತ್ತು ಹೆಬ್ಬಗೋಡಿ ಸರ್ಜಾಪುರ ಸುತ್ತಮುತ್ತ ಮಳೆಯಾಗಿದೆ.  ಇದ್ದಕ್ಕಿದ್ದಂತೆ ದಿಢೀರ್ ಆಗಿ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರ  ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಿನ್ನೆ ದಾವಣಗೆರೆ, ಚಿಕ್ಕಮಗಳೂರು, ಕೊಡಗು  ಸೇರಿದಂತೆ ಅನೇಕ ಕಡೆಗಳಲ್ಲಿ ಆಲಿಕಲ್ಲು ಸಮೇತ ಮಳೆಯಾಗಿತ್ತು. ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಆಲಿಕಲ್ಲು ಮಳೆಯಾಗಿದೆ. ಇದೇ ವೇಳೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಕೂಡಿದ ಮಳೆ ಆರ್ಭಟಿಸಿದ್ದು, ಅಕಾಲಿಕ ಮಳೆಗೆ ಇದುವರೆಗೂ 38 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ 9 ಮಂದಿ,  ರಾಜಸ್ಥಾನದಲ್ಲಿ 6, ಮಧ್ಯಪ್ರದೇಶದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.
ಮುಂಗಾರು ಪೂರ್ವ ಬಿರುಗಾಳಿ ಸಹಿತ ಅಕಾಲಿಕ  ಮಳೆಯಾಗಿದ್ದು, ಕೆಲ ಪ್ರದೇಶಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಹಲವು ರೈತರು ಬೆಳೆದಿದ್ದ ಬೆಳೆ ನಾಶವಾಗಿದೆ. ಮಳೆಯಿಂದ ಹಾನಿಗೊಳಗಾದವರಿಗೆ ಕೇಂದ್ರ ಸರ್ಕಾರ ಪರಿಹಾರ ಪ್ರಕಟಿಸಿದೆ. ರಾಷ್ಟ್ರಿಯ ವಿಪತ್ತು ನಿಧಿಯಿಂದ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ತಲಾ 2 ಲಕ್ಷ  ರೂ. ಗಾಯಗೊಂಡ ಕುಟುಂಬಗಳಿಗೆ ತಲಾ 50 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಪ್ರಧಾನಿ  ಮೋದಿ ಟ್ವೀಟ್ ನಲ್ಲಿ ಪ್ರಕಟಿಸಿದ್ದಾರೆ.
ಎಲ್ಲಾ ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆಯೂ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ರವಾನಿಸಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com