ಕೋಟಿ ಕೋಟಿ ಖರ್ಚಾದರೂ ಪರವಾಗಿಲ್ಲ, ಸಿಸಿಬಿ ಪೊಲೀಸರ ಬಟ್ಟೆ ಬಿಚ್ಚಿಸುತ್ತೇನೆ: ಆರೋಪಿ ಯೂಸೂಫ್ ಷರೀಫ್ ಧಮ್ಕಿ

ನಾನು ಯಾರು, ನನ್ನ ತಾಕತ್ತೇನು ಅಂತ ನಿಮಗೆ ಗೊತ್ತಿಲ್ಲ. ನೀವೆಲ್ಲಾ ನಮ್ಮ ಮನೆ ಮೇಲೆ ದಾಳಿ ನಡೆಸುತ್ತೀರಾ? ಇನ್ನೂ ಎರಡ್ಮೂರು ದಿನಗಳಲ್ಲಿ ಸಿಸಿಬಿ ಕಚೇರಿ ಬಂದ್ ಮಾಡುತ್ತೇನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಾನು ಯಾರು, ನನ್ನ ತಾಕತ್ತೇನು ಅಂತ ನಿಮಗೆ ಗೊತ್ತಿಲ್ಲ. ನೀವೆಲ್ಲಾ ನಮ್ಮ ಮನೆ ಮೇಲೆ ದಾಳಿ ನಡೆಸುತ್ತೀರಾ? ಇನ್ನೂ ಎರಡ್ಮೂರು ದಿನಗಳಲ್ಲಿ ಸಿಸಿಬಿ ಕಚೇರಿ ಬಂದ್ ಮಾಡುತ್ತೇನೆ, ನನ್ನ ಮನೆಗೆ ಬಂದಿದ್ದ ಎಲ್ಲಾ ಪೊಲೀಸರ ಬಟ್ಟೆ ಬಿಚ್ಚಿ ನಿಲ್ಲಿಸುತ್ತೇನೆ. ಇದಕ್ಕಾಗಿ 150 ಕೋಟಿ ಖರ್ಚು ಮಾಡಲು ನಾನು ರೆಡಿ ಎಂದು ಆರೋಪಿಯೊಬ್ಬ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ. 
ಭೂ ವಂಚನೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಉಮ್ರಾ ಡೆವಲಪರ್ಸ್ ಮಾಲೀಕ ಯೂಸೂಫ್ ಷರೀಫ್ ನನ್ನು ಬಂಧಿಸಿದ ವೇಳೆ ಹೀಗೆಲ್ಲಾ ಕೂಗಾಡಿದ್ದಾನೆ. ಈ ಗಲಾಟೆ ಸಂಬಂಧ ಕಾಟನ್ ಪೇಟೆ ಠಾಣೆಯಲ್ಲಿ ಸಿಸಿಬಿ ಹೆಡ್ ಕಾನ್ ಸ್ಟೇಬಲ್ ಸುನೀಲ್ ಕುಮಾರ್ ದೂರು ನೀಡಿದ್ದಾರೆ.
ಈ ದೂರಿನನ್ವಯ ಆರೋಪಿ ಯೂಸೂಫ್ ವಿರುದ್ಧ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ(506) ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ(353) ಆರೋಪಗಳಡಿ ಎಫ್ಐಆರ್ ದಾಖಲಿಸಲಾಗಿದೆ.
ಬಂಧನದ ವೇಳೆ ದೊಡ್ಡ ಡ್ರಾಮಾ ಮಾಡಿದ್ದ ಯೂಸೂಫ್ ನನ್ನ ತಾಕತ್ತು ಏನೆಂದು ತೋರಿಸುತ್ತೇನೆ ಎಂದು ಕೂಗಾಡಿದ್ದು ತನಿಖೆಯಿಂದ ತಪ್ಪಿಸಿಕೊಳ್ಳಲು ತಲೆಯನ್ನು ಗೋಡೆಗೆ ಗುದ್ದಿಕೊಂಡು, ಟೇಬಲ್ ಮೇಲಿದ್ದ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿಕೊಳ್ಳಲು ಯತ್ನಿಸಿದ ಎಂದು ಪೊಲೀಸರು ಹೇಳಿದ್ದಾರೆ.
ಯೂಸೂಫ್ ನ ದೊಂಬರಾಟದ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳಾಗಿದೆ. ಕರ್ತವ್ಯನಿರತ ಪೊಲೀಸರು ಹಾಗೂ ಇಲಾಖೆ ವಿರುದ್ಧ ಕೆಟ್ಟದಾಗಿ ಮಾತನಾಡಿದ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com