ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಕೆಲವು ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಅರಬ್ಬೀ ಸಮುದ್ರದಲ್ಲಿ ವ್ಯಾಪಕ ಗಾಳಿಯಿಂದಾಗಿ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ...
ಮಡಿಕೇರಿ ಮಳೆಯ ಸಂಗ್ರಹ  ಚಿತ್ರ
ಮಡಿಕೇರಿ ಮಳೆಯ ಸಂಗ್ರಹ ಚಿತ್ರ
ಬೆಳಗಾವಿ/ಚಿಕ್ಕಮಗಳೂರು/ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಚುರುಕುಗೊಂಡಿದ್ದು, ಕರಾವಳಿ, ಮಲೆನಾಡು, ಕೊಡುಗು ಸೇರಿದಂತೆ ಉತ್ತರ ಕರ್ನಾಟಕ ಹಲವು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳೂರು ತಾಲೂಕು ಹೊರತುಪಡಿಸಿ, ಉಳಿದ ನಾಲ್ಕು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ, ಆಯಾ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.
ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು, ಸಾರ್ವಜನಿಕರು ನದಿಗೆ ಇಳಿಯದಂತೆ ಸೂಚಿಸಲಾಗಿದೆ.
ಹಾಸನದಲ್ಲಿ ಮುಂಗಾರು ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಸಕೊಡಗಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಈ ಭಾಗದ ಮೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯೊಂದಿಗೆ ಮಂಗಳವಾರ ಮತ್ತು ಬುಧವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ ಕನ್ನಂಗಿಯ ರಮೇಶ್ ಎಂಬ ರೈತ ಮಣ್ಣು ಕುಸಿದು ಸಾವನ್ನಪ್ಪಿದ್ದು, ಶವಾಗಾರಕ್ಕೆ ಇಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಪ್ರಕೃತಿ ವಿಕೋಪ ಪರಿಹಾರದಡಿ 5 ಲಕ್ಷ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.
ಕೊಪ್ಪ ತಾಲೂಕಿನ ಬಂಡೀಗಡಿ ಗ್ರಾಮದಲ್ಲಿ ಬೃಹತ್ ಮರ ರಸ್ತೆಯ ಮೇಲೆ ಉರುಳಿಬಿದ್ದಿದ್ದು, ಮೆಸ್ಕಾಂ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಜೊತೆಯಲ್ಲಿದ್ದ ಮೃತ ರಮೇಶ್  ಮಗನಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು, ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಕುರಿತು ವೈದ್ಯಾಧಿಕಾರಿಯೊಂದಿಗೆ ಮಾಹಿತಿ ಪಡೆದು, "ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್" ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೀರ್ಥಹಳ್ಳಿ ಪಟ್ಟಣದ ಮುಖ್ಯ ರಸ್ತೆಯ ಸಹ್ಯಾದ್ರಿ ಸ್ಕೂಲ್, ಕಾಂಪೋಸಿಟ್ ಜೂನಿಯರ್ ಕಾಲೇಜಿನ ಆವರಣದಲ್ಲಿ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾದ ಸ್ಥಳಕ್ಕೆ  ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.
ಶೃಂಗೇರಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ  ಭಾರೀ ಮಳೆಗೆ ಮೈದುಂಬಿ ಹರಿಯುತ್ತಿದೆ. ಶಾರದಾಂಭ ದೇವಾಲಯದ ತುಂಗಾ ನದಿಯ ಪಕ್ಕದಲ್ಲಿರುವ  ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಇಲ್ಲಿನ ಗಾಂಧಿ ಮೈದಾನಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ. 
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ವರ್ಷಧಾರೆ ಆಗುತ್ತಿದ್ದು,  ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಮಕ್ಕಳು ಶಾಲೆಗೆ ಬಂದರೂ ಸುರಕ್ಷಿತವಾಗಿ ಮರಳಿ ಮನೆಗೆ ಕಳುಹಿಸಲು ಎಸ್‍ಡಿಎಂಸಿ ಸದ್ಯಸರಿಗೆ ಜಿಲ್ಲಾಧಿಕಾರಿ ದಯಾನಂದ್ ಸೂಚಿಸಿದ್ದಾರೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ. 
ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಗ್ರೆ- ಶೃಂಗೇರಿ ಮಧ್ಯದ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜೀವ ನದಿಗಳಿಗೆ ಕಳೆ ಬಂದಿದ್ದು, ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಟ್ಟಿಗೆಹಾರ, ಚಾರ್ಮಾಡಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಚಾರ್ಮಾಡಿಯಲ್ಲಿ ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗುತ್ತಿದ್ದು, ಮಳೆ-ಗಾಳಿಗೆ ಮರಗಳು ಧರೆಗುರುಳುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com