ಕೃಷಿ ಸಮ್ಮಾನ್ ಯೋಜನೆ ಅನುದಾನ ಹೊಂದಾಣಿಕೆ ಸಮಸ್ಯೆ: ಒಬಿಸಿ, ಬಡವರ, ಕೃಷಿಕರ ಯೋಜನೆಗಳಿಗೆ ಬ್ರೇಕ್  

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಿಗೆ ತಿಲಾಂಜಲಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಕೃಷಿ ಸಮ್ಮಾನ್ ಯೋಜನೆ ಅನುದಾನ ಹೊಂದಾಣಿಕೆ ಸಮಸ್ಯೆ: ಒಬಿಸಿ, ಬಡವರ, ಕೃಷಿಕರ ಯೋಜನೆಗಳಿಗೆ ಬ್ರೇಕ್  

ಬೆಂಗಳೂರು:  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕೃಷಿಕ್ ಸಮ್ಮಾನ್ ಯೋಜನೆಗೆ ಪೂರಕವಾಗಿ ಕೃಷಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಹೆಚ್ಚುವರಿ 4 ಸಾವಿರ ರೂಪಾಯಿ ನೀಡುವ ಯೋಜನೆಗೆ ಹಣ ಹೊಂದಿಸುವುದು ಅತಿ ದೊಡ್ಡ ಸವಾಲಾಗಿದ್ದು, ಈ ಯೋಜನೆಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಿಗೆ ತಿಲಾಂಜಲಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಕೃಷಿ ಸಮ್ಮಾನ್ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 2200 ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಅನುದಾನದ ಕೊರತೆ ಎದುರಾಗಿದೆ. ಮೊದಲನೆ ಕಂತಿ ಹಣ ಪಾವತಿಗೆ 1100 ಕೋಟಿ ರೂಪಾಯಿ ಹಾಗೂ ಎರಡನೇ ಕಂತಿಗೆ ಇಷ್ಟೇ ಮೊತ್ತದ ಹಣದ ಅಗತ್ಯವಿದೆ. ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಿಸಲು ಮಧ್ಯಂತರ ವರ್ಷದಲ್ಲಿ ತೀರಾ ಕಷ್ಟ ಎಂದು ಆರ್ಥಿಕ ಇಲಾಖೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದೆ.

ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಆರ್ಥಿಕ ಇಲಾಖೆ ಅನುದಾನಗಳ ಕ್ರೂಢೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ, ತೊಗರಿ ಬೇಳೆ ಕಡಿತ, ಕೃಷಿ ಬೆಳೆಗಳಿಗೆ ಘೋಷಿಸಿದ್ದ ಕನಿಷ್ಠ ಬೆಂಬಲ ಬೆಲೆಗಾಗಿ ಮೀಸಲಿಟ್ಟಿರುವ ಆವರ್ತ ನಿಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿವಿಧ ಸಮುದಾಯಗಳ ಅಭಿವೃದ್ಧಿಗೆ ಹಂಚಿಕೆ ಮಾಡಲಾದ ಅನುದಾನ ಹಾಗೂ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರನ್ನು ರಕ್ಷಿಸಲು ಉದ್ದೇಶಿಸಿ ಮೀಸಲಿರಿಸಿದ್ದ ಅನುದಾನ, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳಿಗೆ ಘೋಷಿಸಿರುವ ಪ್ಯಾಕೇಜ್ ಗಳನ್ನು ಸ್ಥಗಿತಗೊಳಿಸಿ ಲಭ್ಯವಾಗುವ ಅನುದಾನವನ್ನು ಕೃಷಿ ಸಮ್ಮಾನ್ ಯೋಜನೆಗೆ ಸರ್ಕಾರ ಬಳಸಿಕೊಳ್ಳಬಹುದೆಂದು ಮಾಹಿತಿ ನೀಡಿದೆ.

ಕೃಷಿಕ್ ಸಮ್ಮಾನ್ ಯೋಜನೆ ಜಾರಿಗೆ ಒಪ್ಪಿಗೆ ದೊರಕಿದ್ದು, ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಯುನಿಟ್ ಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 2 ಕೆಜಿ ಸೇರಿಸಿ 7 ಕೆಜಿ ಅಕ್ಕಿ ವಿತರಿಸುತ್ತಿದೆ. ಈ ಹೆಚ್ಚುವರಿ 2 ಕೆಜಿ ಅಕ್ಕಿಗೆ ವಾರ್ಷಿಕ 2850 ಕೋಟಿ ರೂ.ವೆಚ್ಚವಾಗುತ್ತಿತ್ತು. ಅಂತೆಯೇ 1 ಕೆಜಿ ತೂಗರಿ ಬೇಳೆ ನೀಡಲು 576 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಹೆಚ್ಚುವರಿ 2 ಕೆಜಿ ಅಕ್ಕಿ ಹಾಗೂ 1 ಕೆಜಿ ತೊಗರಿ ಬೇಳೆ ಹಂಚಿಕೆಯನ್ನು ಸ್ಥಗಿತಗೊಳಿಸಿ 500 ಕೋಟಿ ರೂಪಾಯಿ ಉಳಿತಾಯ ಮಾಡಲು ತೀರ್ಮಾನಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒದಗಿಸಲಾಗಿದ್ದ ಆವರ್ತ ನಿಧಿ ನಿಗದಿ ಮಾಡಿದ್ದ 500 ಕೋಟಿ ರೂಪಾಯಿಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗೆ ಘೋಷಿಸಿ ಮೀಸಲಿಟ್ಟಿದ್ದ 134 ಕೋಟಿ ರೂಪಾಯಿಗಳನ್ನು ಮತ್ತು ವಿಜಯಪುರ ಜಿಲ್ಲೆಯ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರಿಗೆ ಘೋಷಿಸಿದ್ದ 150 ಕೋಟಿ ರೂ. ವಿಶೇಷ ಪ್ಯಾಕೇಜ್ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳಿಗಾಗಿ ಘೋಷಿಸಿದ್ದ 150 ಕೋಟಿ  ರೂಪಾಯಿಗಳ ಪ್ಯಾಕೇಜುಗಳನ್ನು ರದ್ದುಗೊಳಿಸಿದರೆ 1434 ಕೋಟಿ ರೂ. ದೊರೆಯಲಿದೆ. ಇದನ್ನು ಕೃಷಿ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com