ಅತಿವೃಷ್ಟಿ- ಅನಾವೃಷ್ಟಿ ನಿವಾರಣೆಗೆ ಶಕ್ತಿ ಮೀರಿ ಪ್ರಯತ್ನ: ಮುಖ್ಯಮಂತ್ರಿ ಯಡಿಯೂರಪ್ಪ

ರಾಜ್ಯ ಅತಿವೃಷ್ಟಿ-ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿದ್ದು, ಎರಡು ವೈಪರೀತ್ಯ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಅತಿವೃಷ್ಟಿ-ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿದ್ದು, ಎರಡು ವೈಪರೀತ್ಯ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.


ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ನಲವತ್ತೈದು ವರ್ಷಗಳಲ್ಲಿ ಕಂಡರಿಯದ ಪ್ರಕೃತಿ ವಿಕೋಪ ಎದುರಾಗಿದ್ದು, 22 ಜಿಲ್ಲೆಗಳ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಇಲ್ಲಿಯವರೆಗೆ ಪ್ರವಾಹದಿಂದ 61 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ 48 ಗಂಟೆಗಳ ಒಳಗಾಗಿ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ, ನೆರೆ ಸಂತ್ರಸ್ತರಿಗೆ ತಕ್ಷಣಕ್ಕೆ 10 ಸಾವಿರ ರೂಪಾಯಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಮನೆ ದುರಸ್ತಿಗೆ 1 ಲಕ್ಷ ರೂಪಾಯಿ ನೆರವು ಘೋಷಿಸಲಾಗಿದೆ ಎಂದರು.


ತಾವು ಈಗಾಗಲೇ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವೈಮಾನಿಕ ಸಮೀಕ್ಷೆ ನಡೆಸುವುದರ ಜೊತೆಗೆ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.


ಪ್ರವಾಹ ಹಾಗೂ ಭೂಕುಸಿತದಿಂದ ಸುಮಾರು 4.69 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದ್ದು, 58 ಸಾವಿರದ 620 ಮನೆಗಳಿಗೆ ಹಾನಿಯಾಗಿವೆ. ಇಲ್ಲಿಯವರೆಗೆ 8.9 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 859 ಜಾನುವಾರುಗಳು ಮೃತಪಟ್ಟಿದ್ದು, 51 ಸಾವಿರದ 460 ಜಾನುವಾರುಗಳನ್ನು ರಕ್ಷಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,224 ಪರಿಹಾರಗಳ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 3.96 ಲಕ್ಷ ಜನರು ಆಶ್ರಯ ಪಡೆದಿದ್ದಾರೆ ಎಂದರು.


ಕಡಲು ಕೊರತದಿಂದ ಕರಾವಳಿ ಭಾಗದ ಹಲವು ಮೀನುಗಾರರು ಮನೆ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈ ಮೀನುಗಾರರಿಗೆ ನೆರವು ನೀಡಲಿದೆ ಎಂದರು.


ತಾವು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಮೂರು ವಾರವಾಗಿದೆ ರಾಜ್ಯ ಬರ ಮತ್ತು ಭಾರೀ ಪ್ರವಾಹದಿಂದ ತತ್ತರಿಸಿದೆ, ಎಲ್ಲರೂ ಜೊತೆಗೂಡಿ ಸಂತ್ರಸ್ತರ ನೆರವಿಗೆ ನಿಲ್ಲೋಣ ಎಂದು ಕರೆ ನೀಡಿದರು.


ಕೇಂದ್ರ ಸರ್ಕಾರ ಕೂಡ ನೆರೆ ಹಾನಿಗೆ ತಕ್ಷಣ ಸ್ಪಂದಿಸಿದೆ. ನೆರೆಯಲ್ಲಿ ಸಿಲುಕಿದವರ ರಕ್ಷಣೆಗಾಗಿ ಸೇನೆ, ವಿಪತ್ತು ನಿರ್ವಹಣಾ ಪಡೆ,ಸೇನಾ ಹೆಲಿಕ್ಯಾಪ್ಟರ್, ರಕ್ಷಣಾ ದೋಣಿಗಳ ಸೌಲಭ್ಯ ಒದಗಿಸಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸದಾನಂದಗೌಡ, ಪ್ರಹ್ಲಾದ್ ಜೋಷಿ ಭೇಟಿ ನೀಡಿ ಹೆಚ್ಚಿನ ಪರಿಹಾರದ ಭರವಸೆ ನೀಡಿದ್ದಾರೆ. ನೆರೆ ಹಾನಿ ವರದಿ ಪಡೆದು ಹೆಚ್ಚಿನ ನೆರವಿಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com