ಮಾಸ್ತಿ ಗುಡಿ ದುರಂತ: ಪ್ರಕರಣ ಕೈ ಬಿಡುವಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಜಾ, ಪ್ರಕರಣಕ್ಕೆ ಮತ್ತೆ ಜೀವ!

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡಿದ್ದ ಖಳನಟರ ಸಾವಿನ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

Published: 18th August 2019 08:53 AM  |   Last Updated: 18th August 2019 08:53 AM   |  A+A-


Maasthi gudi film tragedy: Court rejects plea of prime accused

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ರಾಮನಗರ: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡಿದ್ದ ಖಳನಟರ ಸಾವಿನ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಈ ಪ್ರಕರಣದ ಕುರಿತು ರಾಮನಗರದ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶನಿವಾರ ನಡೆದ ವಿಚಾರಣೆ ನಡೆಯಿತು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಅವರು, ಐವರು ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದ್ದು, ಆರನೇ ಆರೋಪಿ ಹೆಲಿಕಾಪ್ಟರ್ ಪೈಲೆಟ್ ಪ್ರಕಾಶ್ ಬಿರದಾರ್ ಅವರನ್ನ ಪ್ರಕರಣದಿಂದ ಕೈಬಿಡುವಂತೆ ಆದೇಶ ನೀಡಿದ್ದಾರೆ.

ಮೂಲಗಳ ಪ್ರಕಾರ ಆರೋಪಿ ಪ್ರಕಾಶ್ ಬಿರಾದರ್ ವಿರುದ್ಧ ಸ್ಯಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಶೂಟಿಂಗ್ ವೇಳೆ ಪ್ರಕಾಶ್ ಬಿರಾದರ್ ಅವರು ಹೆಲಿಕಾಪ್ಟರ್ ಚಾಲನೆ ಮಾಡಿದ್ದರು. ಪ್ರಕಾಶ್ ಅವರ ಪರ ಹಿರಿಯ ವಕೀಲ ಐ.ಎಸ್. ದಿಲೀಪ್‍ಕುಮಾರ್ ಅವರು ಪ್ರಬಲವಾಗಿ ವಾದ ಮಂಡಿಸಿದರು ಎನ್ನಲಾಗಿದೆ.

ಇನ್ನು ಮಾಸ್ತಿಗುಡಿ ದುರಂತ ಪ್ರಕರಣದ ಪ್ರಮುಖ ಆರೋಪಿಗಳಾದ ನಿರ್ಮಾಪಕ ಸುಂದರ್ ಪಿ.ಗೌಡ(ಎ1), ನಿರ್ದೇಶಕ ರಾಜಶೇಖರ್(ಎ2), ಸಿದ್ದಾರ್ಥ್ ಅಲಿಯಾಸ್ ಸಿದ್ದು(ಎ3), ಸಾಹಸ ನಿರ್ದೇಶಕ ರವಿವರ್ಮಾ(ಎ4) ಮತ್ತು ಎ.ಪಿ.ಭರತ್ ರಾವ್(ಎ5) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಹೀಗಾಗಿ ಈ ಐವರು ಆರೋಪಿಗಳಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಈ ಮೂಲಕ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಅವರು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದ್ದಾರೆ. ಆ ಮೂಲಕ ಖಳನಟರ ಸಾವಿನ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.

ಏನಿದು ಪ್ರಕರಣ?:
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 2016ರ ನವೆಂಬರ್ 7ರಂದು ನಟ ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ನಡೆದಿತ್ತು. ಈ ವೇಳೆ ಹೆಲಿಕಾಪ್ಟರ್ ನಿಂದ 100 ಅಡಿ ಎತ್ತರದಿಂದ ಖಳನಟ ಅನಿಲ್, ಉದಯ್ ಹಾಗೂ ನಾಯಕ ನಟ ದುನಿಯಾ ವಿಜಯ್ ಜಲಾಶಯಕ್ಕೆ ಜಿಗಿದಿದ್ದರು. ಆದರೆ ಮೂವರಿಗೂ ಈಜು ಬರುತ್ತಿರಲಿಲ್ಲ, ಜೊತೆಗೆ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಹೆಲಿಕಾಪ್ಟರ್ ಮೂಲಕ ಜಿಗಿದಿದ್ದರು. ತಕ್ಷಣವೇ ನಟ ದುನಿಯಾ ವಿಜಯ್ ಅವರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಲಾಗಿತ್ತು. ಆದರೆ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರಿಬ್ಬರ ಮೃತದೇಹಗಳು 48 ಗಂಟೆಯ ಬಳಿಕ ಪತ್ತೆಯಾಗಿದ್ದವು. ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕರ್ನಾಟಕ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಾದ್ಯಂತ ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಅಲ್ಲದ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದ ಚಿತ್ರತಂಡದ ವಿರುದ್ಧವೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp