ರಾತ್ರಿ 2 ಗಂಟೆವರೆಗೂ ಹೊಟೆಲ್, ರೆಸ್ಟೋರೆಂಟ್ ಕಾರ್ಯ ನಿರ್ವಹಣೆ, ಕುಡಿದು ವಾಹನ ಓಡಿಸಿದರೆ ಲೈಸೆನ್ಸ್ ಜಪ್ತಿ..!

ನಾಳೆ ರಾತ್ರಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ
ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ

ಬೆಂಗಳೂರು: ನಾಳೆ ರಾತ್ರಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಬಾರಿ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಕಾನೂನು ಮೀರುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವು ದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಕ್ಷತಾ ದೃಷ್ಟಿಯಿಂದ ಕೆಲವು ನಿಯಮಗಳನ್ನು ಕಠಿಣವಾಗಿ ಪಾಲಿಸಲು ಪೊಲೀಸರು ಮುಂದಾಗಿ ದ್ದಾರೆ. ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.

'ನಾಳೆ ಕ್ಲಬ್, ಬಾರ್​, ರೆಸ್ಟೋರೆಂಟ್ಸ್, ಹೋಟೆಲ್ ಮಾಲೀಕರು ಮಧ್ಯರಾತ್ರಿ 2 ಗಂಟೆಯವರೆಗೆ ತೆರೆಯಬಹುದು. ಆದರೆ ಆನಂತರ ಯಾವುದಾದರೂ ಬಾರ್, ರೆಸ್ಟೋರೆಂಟ್​ನಲ್ಲಿ ಮದ್ಯ ಸರಬರಾಜು ಮಾಡುವುದಾದರೆ ಮಾಲೀಕರು ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಚರ್ಚ್ ಸ್ಟ್ರೀಟ್‍ಗಳಲ್ಲಿ ಸಾಮೂಹಿಕವಾಗಿ ಹೊಸ ವರ್ಷದ ಆಚರಣೆ ನಡೆಯಲಿದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಭಾಗವಹಿಸುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ರಸ್ತೆಗಳಲ್ಲಿ 1500ಕ್ಕೂ ಹೆಚ್ಚು ಅತ್ಯಾಧುನಿಕ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಹೆಚ್ಚುವರಿ ಗಸ್ತು ವಾಹನಗಳು
ಡಿಸೆಂಬರ್ 31ರಂದು ಸಂಜೆ 4ರಿಂದ ರಾತ್ರಿ 9.30ಗಂಟೆವರೆಗೆ, ರಾತ್ರಿ 2ರಿಂದ ಮರುದಿನ ಬೆಳಗ್ಗೆ 8 ಗಂಟೆವರೆಗೆ ಎರಡು ಪಾಳಯದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ನಗರದ ಎಲ್ಲಾ ಡಿಸಿಪಿಗಳು ಗಸ್ತಿನಲ್ಲಿರುತ್ತಾರೆ. ಇಬ್ಬರು ಹಚ್ಚುವರಿ ಪೊಲೀಸ್ ಆಯುಕ್ತರು ಸಹ ಗಸ್ತಿನಲ್ಲಿದ್ದು, ಭದ್ರತೆಯ ನಿಗಾ ವಹಿಸಲಿದ್ದಾರೆ. ಇಡೀ ರಾತ್ರಿ ಹೊಯ್ಸಳ, ಚೀತಾ ಗಸ್ತಿನಲ್ಲಿರುತ್ತವೆ. ಯುವತಿಯರು, ಮಹಿಳೆಯರು ಅಪರಿಚಿತರ ಜತೆ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬಾರದು. ಅತಿ ಹೆಚ್ಚು ಜನ ಸೇರಿ ಹೊಸ ವರ್ಷ ಆಚರಣೆ ಮಾಡುವ ಸ್ಥಳಗಳಲ್ಲಿ ರಕ್ಷಣಾ ದ್ವೀಪ ರಚನೆ ಮಾಡಲಾಗುವುದು. ಅಲ್ಲಿ ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಆ ದ್ವೀಪದಿಂದಲೇ ವೋಲಾ, ಊಬರ್ ಕ್ಯಾಬ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಅಲ್ಲಿಂದ ತೆರಳಬೇಕಾಗಿರುವ ಸ್ಥಳಗಳಿಗೆ ಕ್ಯಾಬ್ ಮೂಲಕ ಹೋಗಬಹುದು. ಆಟೋ ಚಾಲಕರು ಕೂಡ ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ.

ಮಾರ್ಗ ಬದಲಾವಣೆ
ಎಂ.ಜಿ.ರಸ್ತೆಯಲ್ಲಿ ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನು ಮುಂದಕ್ಕೆ ಹೋಗುವ ವಾಹನಗಳು ಅನಿಲ್‍ಕುಂಬ್ಳೆ ವೃತ್ತದ ಬಳಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್, ಬಿಆರ್‍ವಿ ಜಂಕ್ಷನ್ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ಸಂಚರಿಸಿ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ.ರಸ್ತೆ ತಲುಪಿ ಮುಂದೆ ಸಾಗಬೇಕು. ಟ್ರಿನಿಟಿ ವೃತ್ತದ ಕಡೆಯಿಂದ ಬರುವ ವಾಹನಗಳು ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಮಣಿಪಾಲ್ ಸೆಂಟರ್ ಬಳಿ ಬಲ ಎಡ ತಿರುವು ಪಡೆದು ಕಬ್ಬನ್ ರಸ್ತೆಯಲ್ಲಿ ಮುಂದೆ ಸಾಗಬೇಕು. ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ, ಡಿಕನ್ಸನ್ ರಸ್ತೆ ಮಾರ್ಗವಾಗಿ ಕಬ್ಬನ್ ರಸ್ತೆ ಮೂಲಕ ಮುಂದೆ ಹೋಗಬೇಕು. ಸಂಚಾರಿ ಪೊಲೀಸರು ನಿಗದಿ ಮಾಡಿರುವ ಸ್ಥಳಗಳಲ್ಲೇ ಪಾರ್ಕಿಂಗ್ ಮಾಡಬೇಕೆಂದು ಆಯುಕ್ತರು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com