ಐಎಂಎ ವಂಚನೆ ಪ್ರಕರಣ: ಮನ್ಸೂರ್ ದುಬೈಗೆ ಪರಾರಿಯಾಗಿರುವ ಶಂಕೆ, ಹೆಚ್ಚಿದ ಹೂಡಿಕೆದಾರರ ಆತಂಕ

ಹೂಡಿಕೆ ಹೆಸರಿನಲ್ಲಿ ಸಹಸ್ರಾರು ಜನರಿಗೆ ವಂಚಿಸಿರುವ ಪ್ರತಿಷ್ಠಿತ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ದುಬೈಗೆ ಪರಾರಿಯಾಗಿರುವ...
ಮೊಹಮ್ಮದ್ ಮನ್ಸೂರ್ ಖಾನ್
ಮೊಹಮ್ಮದ್ ಮನ್ಸೂರ್ ಖಾನ್
ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಸಹಸ್ರಾರು ಜನರಿಗೆ ವಂಚಿಸಿರುವ ಪ್ರತಿಷ್ಠಿತ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ದುಬೈಗೆ ಪರಾರಿಯಾಗಿರುವ ಕುರಿತು ಸಂಶಯ ವ್ಯಕ್ತವಾಗಿದೆ. 
ಆತ ಕಳೆದ ತಿಂಗಳಾಂತ್ಯದಲ್ಲಿ ದುಬೈಗೆ ತೆರಳಿರುವುದಾಗಿ ಸ್ವತಃ ಹೂಡಿಕೆದಾರರೇ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾದ ಹೂಡಿಕೆದಾರರು ಮಂಗಳವಾರ ಕೂಡ ಸಹಸ್ರಾರು ಸಂಖ್ಯೆಯಲ್ಲಿ ದೂರು ನೀಡಲು ಬಂದಿದ್ದ ದೃಶ್ಯ ಶಿವಾಜಿನಗರದ ಶಾದಿ ಮಹಲ್ ನಲ್ಲಿ ಕಂಡುಬಂತು. ಪ್ರತಿಯೊಬ್ಬರ ಕಥೆಯೂ ಕರುಣಾಜನಕವಾಗಿದ್ದು, ಭವಿಷ್ಯದ ಬದುಕು ಕಟ್ಟಿಕೊಳ್ಳಲು ಹೂಡಿಕೆ ಮಾಡಿದವರು ಇದೀಗ ದಿಕ್ಕು ತೋಚದಂತಾಗಿದ್ದಾರೆ. 
ಸೋಮವಾರ ಶಿವಾಜಿನಗರದ ಕಾಮತ್ ಹೋಟೆಲ್ ಪಕ್ಕದ ಚರ್ಚ್ ನಲ್ಲಿ ತೆರೆಯಲಾಗಿದ್ದ  ದೂರು ಕೇಂದ್ರವನ್ನು ಶಾದಿ ಮಹಲ್ ಗೆ ಸ್ಥಳಾಂತರಿಸಿದ್ದರಿಂದ ಹೂಡಿಕೆದಾರರು ದೂರು ನೀಡಲು ಪರದಾಡುವಂತಾಯಿತು. 
ದೂರದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಶಾದಿ ಮಹಲ್ ನ ಮುಂಭಾಗದ ರಸ್ತೆಯಲ್ಲಿ ಜನಜಂಗುಳಿ ಉಂಟಾಗಿ ಸಂಚಾರ ವ್ಯತ್ಯಯವಾಗಿತ್ತು. ವಂಚನೆಗೊಳಗಾದ ಕೆಲವರು ವಾಹನದ ಮೇಲೆ, ನೆಲದ ಮೇಲೆ ಕುಳಿತುಕೊಂಡು ಇಲ್ಲವೇ ನಿಂತುಕೊಂಡೇ ದೂರಿನ ಪ್ರತಿ ತುಂಬುವುದರಲ್ಲಿ ಮಗ್ನರಾಗಿದ್ದ ದೃಶ್ಯ ಮನಕಲುಕುವಂತಿತ್ತು.
ಶಿವಾಜಿನಗರದ ಹೋಟೆಲ್, ರಸ್ತೆ ಸೇರಿ ಬಸ್ ನಿಲ್ದಾಣದ ಸುತ್ತಮುತ್ತ ಎಲ್ಲಾ ಪ್ರದೇಶಗಳಲ್ಲಿಯೂ ದಾಖಲೆಗಳನ್ನು ಹಿಡಿದುಕೊಂಡು ಹೂಡಿಕೆದಾರರು ತಿರುಗುತ್ತಿದ್ದರು. ಮಧ್ಯಾಹ್ನದವರೆಗೆ ತಾಳ್ಮೆಯಿಂದಿದ್ದ ಸಹಸ್ರಾರು ಜನ ನಂತರ, ಆಭರಣ ಮಳಿಗೆ ಎದುರಿಗೆ ಬಂದು ಪ್ರತಿಭಟನೆಗೆ ಮುಂದಾದರು. ಅವರನ್ನು ಸಮಾಧಾನ ಪಡಿಸುವಾಗ ಪೊಲೀಸ್ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ಕೂಡ ನಡೆಯಿತು. ಆಭರಣ ಮಳಿಗೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. 
ಬೌರಿಂಗ್ ಆಸ್ಪತ್ರೆ ಎದುರು ಸಂಚಾರ ದಟ್ಟಣೆ ಉಂಟಾದ ಪರಿಣಾಮ ಅದನ್ನು ಚದುರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡುವಂತಾಯಿತು. ಮಧ್ಯಾಹ್ನವಾದಂತೆ ದೂರು ಕೊಡಲು ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗ ತೊಡಗಿತ್ತು. ಇದುವರೆಗೆ 3 ಸಾವಿರಕ್ಕಿಂತ ಹೆಚ್ಚು ದೂರು ದಾಖಲಾಗಿದೆ ಎಂದು ಅಂದಾಜಿಸಲಾಗಿದೆ.
ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಂಚನೆಗೊಳಗಾದ ಜಾವೇದ್ ಖಾನ್, ನಾನು ಮುಂಚೆ ಮುಹಮದ್ ಮುನ್ಸೂರ್ ಅವರ ಬಳಿ ಕಾರು ಚಾಲಕನಾಗಿದ್ದೆ. ಕಾರಣಾಂತರಗಳಿಂದ ಕೆಲಸ ಬಿಟ್ಟೆ. ಮಕ್ಕಳ ಮದುವೆಗೆಂದು 4 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದೆ. ಚುನಾವಣೆ ಹಿನ್ನೆಲೆಯಲ್ಲಿ ಬಡ್ಡಿ ಹಣ ಕೊಡುವುದರಲ್ಲಿ ಸ್ವಲ್ಪ ತಡವಾಗುತ್ತಿದೆ. ಮುಂದಿನ ತಿಂಗಳಿನಿಂದ ಎಲ್ಲಾ ಸರಿಯಾಗುತ್ತದೆ ಎಂದು ಹೇಳಿದರು. ನಾನು ಬಿಜಾಪುರಕ್ಕೆ ಮದುವೆ ಸಮಾರಂಭಕ್ಕೆಂದು ತೆರಳಿ ವಾಪಸ್ಸಾಗುತ್ತಿದಂತೆ ಮನ್ಸೂರ್ ಅವರು ಪರಾರಿಯಾಗಿರುವ ಸುದ್ದಿ ಕೇಳಿಬಂದಿದೆ. ಸಾಕಷ್ಟು ಸ್ಥಿತಿವಂತರಾಗಿರುವ ಅವರು ಈ ರೀತಿ ಹೂಡಿಕೆದಾರರನ್ನು ವಂಚಿಸುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಅವರು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಕಡಿಮೆ. ರಾಜ್ಯದಲ್ಲಿಯೇ ಇದ್ದಾರೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ಇನ್ನೊರ್ವ ಹೂಡಿಕೆದಾರ ಸೋಹೆಲ್ ಎಂಬುವವರು ಮಾತನಾಡಿ, 'ನಾವು ನಾಲ್ವರು ಭದ್ರಾವತಿಯಿಂದ ಬೆಂಗಳೂರಿಗೆ ದೂರು ನೀಡಲು ಬಂದಿದ್ದೇವೆ. ವೃತ್ತಿಯಲ್ಲಿ ನಾನು ಗ್ರಾಫಿಕ್ ಡಿಸೈನರ್. ನಮ್ಮ ಕುಟುಂಬದ 10ಜನ ಸೇರಿ ಒಟ್ಟು 60 ಲಕ್ಷ ರೂ. ಹೂಡಿಕೆ ಮಾಡಿದ್ದೇವೆ. ಮೊದಲು ನಾನು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. 2017ರಿಂದ ಹಣ ಹೂಡಿಕೆ ಮಾಡಿದ್ದು, ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಮಾರ್ಚ್ ತಿಂಗಳಿನಿಂದ ಹಣ ಕೊಟ್ಟಿಲ್ಲ. ಮನ್ಸೂರ್ ಅವರು ನನಗೆ ಪರಿಚಯವಿಲ್ಲ. ನಮ್ಮ ಸ್ನೇಹಿತರು ಹೂಡಿಕೆ ಮಾಡಿದ್ದರಿಂದ ನಾವು ಕೂಡ ಮದುವೆ ಹಾಗೂ ಸ್ವಲ್ಪ ಹಣ ಉಳಿತಾಯವಾಗಲಿ ಎಂದು ಹೂಡಿಕೆ ಮಾಡಿದ್ದೆವು. ಕೊಟ್ಟ ಹಣದಲ್ಲೀಗ ಅರ್ಧದಷ್ಟಾದರೂ ಬಂದರೆ ಸಾಕು ಎಂದು ಅವರು ಅಳಲು ತೋಡಿಕೊಂಡರು.
ಇದೇ ರೀತಿ ಹೂಡಿಕೆ ಮಾಡಿದವರಲ್ಲಿ ಆತಂಕ ಮನೆ ಮಾಡಿದ್ದು, ಮಕ್ಕಳ ವಿದ್ಯಾಭ್ಯಾಸ, ವಿವಾಹ, ಸ್ವಂತ ಮನೆಯ ಕನಸುಗಳನ್ನು ಹೊತ್ತಕೊಂಡಿದ್ದ ಅವರು ಎಲ್ಲವನ್ನು ಕಳೆದುಕೊಂಡು ದಿಕ್ಕುತೋಚದೆ ಪರದಾಡುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com