ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಗಾವಲು

ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಫೇಸ್ ಬುಕ್....

Published: 21st March 2019 12:00 PM  |   Last Updated: 21st March 2019 07:22 AM   |  A+A-


Election Commission to keep close eye on social media platforms in Karnataka

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ಬೆಂಗಳೂರು: ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಫೇಸ್ ಬುಕ್, ವಾಟ್ಸ್ ಅಪ್, ಟ್ವಿಟರ್, ಗೂಗಲ್, ಇನ್ಸ್ಟ್ರಾಗ್ರಾಮ್, ಶೇರ್ ಚಾಟ್ ಮತ್ತಿತರ ಸಾಮಾಜಿಕ ಜಾಲ ತಾಣಗಳ ಮೇಲೆ ಕಣ್ಣಿಡುವಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಸೂಚನೆ ನೀಡಿದೆ. 

ನಾಮಪತ್ರ ಸಲ್ಲಿಸುವಾಗ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳ ಬಗ್ಗೆಯೂ ಮಾಹಿತಿ ನೀಡುವುದನ್ನು ಈ ಬಾರಿ ಕಡ್ಡಾಯಗೊಳಿಸಲಾಗಿದೆ. ಇವುಗಳ ಮೇಲೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡುವ ವಿಚಕ್ಷಣ ದಳ ಕಣ್ಣಿಟ್ಟು ಕಾರ್ಯನಿರ್ವಹಿಸುತ್ತಿದೆ.  

ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಸಹ ಸಾಮಾಜಿಕ ಮಾಧ್ಯಮ ವೇದಿಕೆಗಳು, ಇಂಟರ್ ನೆಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಆಫ್ ಇಂಡಿಯಾದೊಂದಿಗೆ ಬುಧವಾರ ಮಹತ್ವದ ಸಭೆ ನಡೆಸಿದ್ದು, ಈ ಸಾಮಾಜಿಕ ಮಾಧ್ಯಮಗಳು ಸ್ವಯಂ ನಿಯಂತ್ರಣಕ್ಕೆ ಒಳಪಡುವುದಾಗಿ ಆಯೋಗಕ್ಕೆ ಭರವಸೆ ನೀಡಿವೆ. 

ಕೇಂದ್ರ ಚುನಾವಣಾ ಆಯೋಗ ಸಹ ಎಲ್ಲಾ ರಾಜ್ಯಗಳಿಗೆ ಸ್ಪಷ್ಟ ಸೂಚನೆ ರವಾನಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಮೂಗುದಾರ ಹಾಕುವಂತೆ ನಿರ್ದೇಶನ ನೀಡಿದೆ. 
ಇದರ ಜತೆಗೆ ಪ್ರಮುಖ ರಾಜಕೀಯ ಪಕ್ಷಗಳ ರಾಜ್ಯ ಘಟಕಗಳು ಆರಂಭಿಸಿರುವ ಸಾಮಾಜಿಕ ಜಾಲ ತಾಣಗಳ ಮೇಲೂ ವಿಚಕ್ಷಣ ದಳ ನಿಗಾವಹಿಸುತ್ತಿವೆ. ಜತೆಗೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಬೆಂಬಲಿಗ ಸಂಘಟನೆಗಳ ಜಾಲತಾಣಗಳನ್ನು ಸಹ ಪರಿಶೀಲನೆಗೊಳಪಡಿಸಲಿದೆ. 

ಅಭ್ಯರ್ಥಿಗಳ ಅಭಿಮಾನಿ ಬಳಗ, ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಸಂಘಟನೆಗಳು ತಮ್ಮ ಪಕ್ಷ ಹಾಗೂ ಅಭ್ಯರ್ಥಿಗಳ ಮೇಲಿನ ಅಭಿಮಾನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಬಹುದು. ಆದರೆ ಯಾವುದೇ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವಂತಿಲ್ಲ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ.ಕೆ.ಜಿ. ಜಗದೀಶ್ ಹೇಳಿದ್ದಾರೆ. 

ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳಿಗಾಗಿ ಆಕರ್ಷಕವಾಗಿ ವಿನ್ಯಾಸಗೊಳಿಸಿದ ಪೋಸ್ಟರ್ ಗಳನ್ನು ಹಾಕುವಂತಿಲ್ಲ. ಹಾಗೇನಾದರೂ ಹಾಕಿದರೆ ಅದರ ವಿನ್ಯಾಸಕ್ಕೆ ತಗಲುವ ಖರ್ಚು ವೆಚ್ಚ ಅಭ್ಯರ್ಥಿಯ ಖಾತೆಗೆ ಸೇರಿಸಲಾಗುತ್ತದೆ. ಯಾವುದೇ ಸಾಮಾಜಿಕ ಜಾಲ ತಾಣಗಳಲ್ಲಿ ಜಾಹೀರಾತು ನೀಡುವ ಮುನ್ನ ಸಂಬಂಧಪಟ್ಟ ಅಭ್ಯರ್ಥಿಯ ಅನುಮತಿ ಪತ್ರ ಪಡೆಯಬೇಕು. ಆ ವೆಚ್ಚವನ್ನು ಸಹ ಅಭ್ಯರ್ಥಿಯ ಖರ್ಚು ವೆಚ್ಚಕ್ಕೆ ಸೇರಿಸಲಾಗುವುದು. ಆದರೆ ಪಕ್ಷದ ಪರವಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಯಾವುದೇ ನಿರ್ಬಂಧವಿಲ್ಲ ಎಂದು ಅವರು ಹೇಳಿದ್ದಾರೆ. 

ಇನ್ನು ರಾಜ್ಯ ಸರ್ಕಾರದ ಅಧಿಕೃತ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಪ್ ಲೋಡ್ ಮಾಡುವಂತಿಲ್ಲ. ಹೊಸದಾಗಿ ಯಾವುದೇ ಛಾಯಾಚಿತ್ರ, ಸಾಧನೆಗಳ ವಿವರಗಳನ್ನು ಅಳವಡಿಸಬಾರದು ಎಂದು ಆಯೋಗ ಸುತ್ತೋಲೆ ಹೊರಡಿಸಿದೆ. 

ಮತ್ತೊಂದೆಡೆ ಪ್ರಮುಖ ರಾಜಕೀಯ ನಾಯಕರಾದ ನರೇಂದ್ರ ಮೋದಿ, ರಾಹುಲ್ ಗಾಂಧಿ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅಭಿಮಾನಿ ಬಳಗದ ಹೆಸರಿನಲ್ಲಿ ತೆರೆದಿರುವ ಖಾತೆಗಳಲ್ಲಿನ ಸ್ಟೇಟಸ್ ಗಳ ಡಿಜಿಟಲ್ ದಾಖಲೀಕರಣ ಸಹ ನಡೆಯುತ್ತಿದೆ. 

ಚುನಾವಣಾ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಕಾಯ್ದುಕೊಳ್ಳಲು ಮತ್ತು ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಾಮಾಜಿಕ ಜಾಲ ತಾಣಗಳನ್ನು ಸಹ ನೀತಿ ಸಂಹಿತೆ ವ್ಯಾಪ್ತಿಯಡಿ ತರಲಾಗಿದೆ. ಚುನಾವಣೆ ಮಹತ್ವದ ಮೂಲ ಆಶಯವನ್ನು ಅರ್ಥಮಾಡಿಕೊಂಡು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಆಯೋಗ ಉದ್ದೇಶವಾಗಿದೆ.
Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp