ಮಂಡ್ಯ: ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಪತಿ; ಪತಿ ಮನೆಮುಂದೆ ಪತ್ನಿ ಧರಣಿ

ಕೋರ್ಟ್ ಆದೇಶ ನೀಡಿದ್ದರೂ ಮನೆಗೆ ಕರೆದುಕೊಳ್ಳದ ಪತಿಯ ಮನೆ ಎದುರು ಪತ್ನಿ ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪ್ರಕರಣ ಮಂಡ್ಯದ ಅನ್ನಪೂಣೇಶ್ವರಿ ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಕೋರ್ಟ್ ಆದೇಶ ನೀಡಿದ್ದರೂ ಮನೆಗೆ ಕರೆದುಕೊಳ್ಳದ ಪತಿಯ ಮನೆ ಎದುರು ಪತ್ನಿ ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪ್ರಕರಣ ಮಂಡ್ಯದ ಅನ್ನಪೂಣೇಶ್ವರಿ ನಗರದಲ್ಲಿ ನಡೆದಿದೆ.

ಮಂಡ್ಯದ ಅನ್ನಪೂಣೇಶ್ವರಿ ನಗರದ ೫ ನೇ ಕ್ರಾಸ್‌ನ ನಿವಾಸಿ ಅಶೋಕ್ ಎಂಬುವವರ ಮನೆಯ ಎದುರೇ ಪತ್ನಿ ಶಾಂತಕುಮಾರಿ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮೂಲತಃ ನಾಗಮಂಗಲ ತಾಲ್ಲೂಕಿನ ನರುಗೊಂಡನಹಳ್ಳಿ ಅಶೋಕ್ ಮಂಡ್ಯ ತಾಲ್ಲೂಕಿನ ಹೊನ್ನಾಯಕನಹಳ್ಳಿಯ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯನಿರ್ವಹಿಸುತ್ತಿದ್ದರೆ, ಮಂಡ್ಯ ತಾಲ್ಲೂಕಿನ ಹೊನಗಾನಹಳ್ಳಿಯ ಶಾಂತಕುಮಾರಿ ಕೆಸ್ತೂರು ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ; 
ಸುಮಾರು ೯ ವರ್ಷಗಳ ಹಿಂದೆ ನಾಗಮಂಗಲ ತಾಲ್ಲೂಕಿನ ನರುಗೊಂಡನಹಳ್ಳಿಯ ಗಂಗೇಗೌಡರ ಪುತ್ರ ಅಶೋಕ್ ಅವರಿಗೆ ಮಂಡ್ಯ ತಾಲ್ಲೂಕಿನ ಹೊನಗಾನಹಳ್ಳಿಯ ದೇವೇಗೌಡರ ಪುತ್ರಿ ಶಾಂತಕುಮಾರಿ ಅವರನ್ನು ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.ಹಲವು ವರ್ಷಗಳ ಕಾಲ ಪತ್ನಿಯೊಂದಿಗೆ ಅನ್ಯೋನ್ಯವಾಗಿಯೇ ಇದ್ದ ಪತಿ ಅಶೋಕ್ ೨೦೧೪ ರಲ್ಲಿ ಬೇರೆ ಮನೆ ಮಾಡುವುದಾಗಿ ಹೇಳಿ ಪತ್ನಿ ಶಾಂತಕುಮಾರಿಯನ್ನು ತವರಿಗೆ ಕಳುಹಿಸಿ,ಕೆಲ ದಿನಗಳ ಬಳಿಕ ವಿವಾಹ ವಿಚ್ಚೇದನದ ನೊಟೀಸ್ ಕಳುಹಿಸಿದ್ದರು ಎನ್ನಲಾಗಿದೆ.ಆದರೆ ವಿಚ್ಚೇದನಕ್ಕೆ ಶಾಂತಕುಮಾರಿ ಒಪ್ಪದ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ೮.೨.೨೦೧೯ ರಂದು ಏಕಪಕ್ಷೀಯ ವಿಚ್ಚೇದನಕ್ಕೆ ಅನುಮತಿ ನೀಡದೆ ಪತ್ನಿಯನ್ನು ಮನೆಗೆ ಕರೆದೊಯ್ಯುವಂತೆ ಆದೇಶ ನೀಡಿದೆ.ಕೋರ್ಟ್ ಆದೇಶದ ಬಳಿಕ ಮೇ ತಿಂಗಳ ನಂತರ ಮನೆಗೆ ಕರೆದೊಯ್ಯುವುದಾಗಿ ಒಪ್ಪಿಕೊಂಡಿದ್ದ ಪತಿ ಅಶೋಕ್ ಇಲ್ಲಿಯ ತನಕವೂ ಮನೆಗೆ ಕರೆದುಕೊಂಡು ಹೋಗದೆ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಕೋರ್ಟ್ ಆದೇಶದ ನಡುವೆಯೂ ಪತಿ ತನ್ನನ್ನು ಮನೆಗೆ ಕರೆದೊಯ್ಯದೆ ಅನುಸರಿಸುತ್ತಿರುವ ವರ್ತನೆಯಿಂದ ಬೇಸತ್ತ ಶಾಂತಕುಮಾರಿ ಅವರು ಇಂದಿನಿಂದಲೇ (ಗುರುವಾರ) ಪತಿಯ ಮನೆಯ ಬಾಗಿಲ ಮುಂದೆ ಉಪವಾಸ ಸತ್ಯಾಗ್ರಹ ಧರಣಿ ಆರಂಭಿಸಿದ್ದಾರೆ.

ಕೋರ್ಟ್ ಆದೇಶ ಮಾಹಿತಿಯನ್ನು ಪೊಲೀಸರಿಗೆ ನೀಡಿ ಉಪನ್ಯಾಸಕಿ ಶಾಂತಕುಮಾರಿ ಧರಣಿ ಆರಂಭಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಪೇದೆಯೂ ಸೇರಿದಂತೆ ಇಬ್ಬರು ಸಿಬ್ಬಂದಿಗಳು ಭದ್ರತೆ ನೀಡುತ್ತಿದ್ದಾರೆ. ಸೊಸೆ ಬಂದ ಮನೆಯ ಮುಂದೆ ಧರಣಿ ಕೂರುತ್ತಿದ್ದಂತೆಯೇ ಅಶೋಕ್ ತಂದೆ ಗಂಗೇಗೌಡರನ್ನು ಮಾತನಾಡಿಸಲು ಮುಂದಾಗುತ್ತಿದ್ದಂತೆ ಆತ ಮಹಿಳಾ ಪೇದೆಯನ್ನು ಹೊರಕ್ಕೆ ತಳ್ಳಿ ಮನೆಗೆ ಬೀಗಹಾಕಿಕೊಂಡು ಪರಾರಿಯಾಗಿದ್ದಾರೆ.

ಇದರ ನಡುವೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಂತಕುಮಾರಿ``ತನಗೆ ನ್ಯಾಯ ಸಿಗೋವರೆಗೂ ಇಲ್ಲಿಂದ ಕದಲುವುದಿಲ್ಲ ಅಂತ ಪಟ್ಟುಹಿಡಿದು ಧರಣಿ ಮುಂದುವರೆಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಅಶೋಕ್ ಮತ್ತು ಶಾಂತಕುಮಾರಿ ದಂಪತಿಗಳಿಗೆ ಇಲ್ಲಿಯವರೆಗೂ ಮಕ್ಕಳೇ ಆಗಿಲ್ಲ ಎಂದು ತಿಳಿದು ಬಂದಿದೆ, ಕೋರ್ಟ್ ತೀರ್ಪಿನ ನಡುವೆಯೂ ಪತಿಯಿಂದ ಅನ್ಯಾಯಕ್ಕೊಳಗಾಗಿರುವ ಶಾಂತಕುಮಾರಿಗೆ ಮುಂದೆ ಯಾವ ರೀತಿಯಲ್ಲಿ ನ್ಯಾಯಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ವರದಿ; ನಾಗಯ್ಯ,ಮಂಡ್ಯ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com