ಐಟಿ ದಾಳಿ ಹಿನ್ನಲೆ: ಮಾಜಿ ಡಿಸಿಎಂ ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಶರಣು!

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮನೆ ಹಾಗೂ ಕಾಲೇಜುಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ, ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪರಮೇಶ್ವರ್ ಪಿ ಎ ರಮೇಶ್
ಪರಮೇಶ್ವರ್ ಪಿ ಎ ರಮೇಶ್

ಬೆಂಗಳೂರು: ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮನೆ ಹಾಗೂ ಕಾಲೇಜುಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ, ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಎರಡು ದಿನಗಳಿಂದ  ಜಿ. ಪರಮೇಶ್ವರ್ ಒಡೆತನದ ಕಾಲೇಜು ಮತ್ತು ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಹೀಗಾಗಿ ಐಟಿ ವಿಚಾರಣೆ ಎದುರಿಸಲು ಸಾಧ್ಯವಾಗದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜ್ಞಾನ ಭಾರತಿ ವಿವಿ ಕ್ಯಾಂಪಸ್ ವ್ಯಾಪ್ತಿಯಲ್ಲಿ  ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ತಮ್ಮ ಇಬ್ಬರು ಆಪ್ತರಿಗೆ ಕರೆ ಮಾಡಿದ್ದ ರಮೇಶ್ ನಾನು ಬಡವ, ನನ್ನ ಮನೆ ಮೇಲೆ ಐಟಿ ದಾಳಿ ನಡೆದಿದೆ, ಇಷ್ಟು ದಿನ ನಿಯತ್ತಿನಿಂದ ಬದುಕಿದ್ದೇನೆ, ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಲು ಆಗುತ್ತಿಲ್ಲ, ಸಿಕ್ಕಾಪಟ್ಟೆ ಪ್ರಶ್ನೆ ಮಾಡುತ್ತಾರೆ, ನನ್ನಿಂದ ಇರಲು ಆಗುವುದಿಲ್ಲ ಎಂದು ಹೇಳಿ ನಿನ್ನೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. 

ಆತ್ಮಹತ್ಯೆ ಮಾಡಿಕೊಂಡ ರಮೇಶ್​ ಕುಣಿಗಲ್ ಮೂಲದವರಾಗಿದ್ದು, ಕೆಲವು ವರ್ಷ ಕೆಪಿಸಿಸಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್​ ಸರ್ಕಾರ ಬಂದ ಬಳಿಕ ಪರಮೇಶ್ವರ್​ ಅವರ ಪಿಎ ಆಗಿದ್ದರು. ಮೈತ್ರಿ ಸರ್ಕಾರದಲ್ಲಿ ಪರಮೇಶ್ವರ್ ಡಿಸಿಎಂ ಆದ ಬಳಿಕ ಸರ್ಕಾರದಿಂದ ಪಿಎ ಆಗಿ ನೇಮಕವಾಗಿದ್ದರು ಎಂದು ತಿಳಿದು ಬಂದಿದೆ.

ನೀಟ್‌ ಪರೀಕ್ಷೆ ಮೂಲಕ ಭಾರತ ವೈದ್ಯಕೀಯ ಮಂಡಳಿ ಹಂಚಿಕೆ ಮಾಡಿದ್ದ ಸೀಟುಗಳನ್ನು ಅಕ್ರಮವಾಗಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ ಮುಖಂಡರಾದ ಪರಮೇಶ್ವರ ಅವರಿಗೆ ಸೇರಿದ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಹಾಗೂ ಆರ್. ಎಲ್‌. ಜಾಲಪ್ಪ ಅವರ ದೇವರಾಜ ಅರಸು ಶಿಕ್ಷಣ ಸಂಸ್ಥೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಲೆಕ್ಕ ಕೊಡದ ಭಾರಿ ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದರು. ಈ ಬಗ್ಗೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದರು.

ರಮೇಶ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಎನ್ನಲಾಗಿದ್ದು, ಇದು ನಿಜವಾದರೆ ಅವರ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಮೇಶ್ ಅವರ ಆತ್ಮಹತ್ಯೆ ಬಗ್ಗೆ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೂ ಮುನ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದರು ಎಂದು ತಿಳಿದಿದ್ದೇನೆ. ಅಲ್ಲದೇ 2-3 ದಿನಗಳಿಂದ ಐಟಿ ಅಧಿಕಾರಿಗಳು ವಿಚಾರಣೆ ಮಾಡುವ ವೇಳೆ ಕಿರುಕುಳ ನೀಡಿದ್ದು, ಈ ಕಿರುಕುಳ ತಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಅವರ ಕುಟುಂಬಕ್ಕೆ ಸಾಂತ್ವನವನ್ನು ಹೇಳುತ್ತೇನೆ. ಅವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com