ಸಂಚಾರಿ ನಿಯಮ ಉಲ್ಲಂಘನೆ: ಹೊಸ ನಿಯಮದಂತೆ ಒಂದೇ ದಿನ 30 ಲಕ್ಷ ರೂ. ದಂಡ ಸಂಗ್ರಹ!

ನಾಗರಿಕರು ಮೋಟಾರು ವಾಹನ ಕಾಯ್ದೆಯ 24 ನಿಯಮಗಳನ್ನು ಉಲ್ಲಂ‍‍ಘಿಸಿದಲ್ಲಿ, ರಾಜ್ಯ ಸರ್ಕಾರ ನೂತನವಾಗಿ ಹೊರಡಿಸಿರುವ ನಿಯಮದಂತೆ ಸೆ. 3ರಿಂದ ಹೆಚ್ಚುವರಿ ದಂಡ ವಸೂಲಿ ಮಾಡಲಾಗುತ್ತಿದೆ...
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ನಾಗರಿಕರು ಮೋಟಾರು ವಾಹನ ಕಾಯ್ದೆಯ 24 ನಿಯಮಗಳನ್ನು ಉಲ್ಲಂ‍‍ಘಿಸಿದಲ್ಲಿ, ರಾಜ್ಯ ಸರ್ಕಾರ ನೂತನವಾಗಿ ಹೊರಡಿಸಿರುವ ನಿಯಮದಂತೆ ಸೆ. 3ರಿಂದ ಹೆಚ್ಚುವರಿ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ನಗರದ ಸಂಚಾರ ನಿರ್ವಹಣಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ, ಪ್ರಸ್ತುತ ಶೇ. 60ರಷ್ಟು ದುಪ್ಪಟ್ಟು ದಂಡ ವಸೂಲಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಗೊಳ್ಳಬೇಕು ಎಂದರು.
 
ದ್ವಿಚಕ್ರ ವಾಹನದಲ್ಲಿ ಮೂರಕ್ಕಿಂತ ಹೆಚ್ಚು ಜನ ಪ್ರಯಾಣಿಸಿದರೇ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೇ, ಮಿತಿಮೀರಿದ ವೇಗದ ಚಾಲನೆ, ನೋಂದಣಿಯಾಗದ ವಾಹನ ಹೀಗೆ ಇತರೆ ಸಂಚಾರಿ ಕಾನೂನು ನಿಯಮ ಉಲ್ಲಂಘಿಸಿದರೇ ಸಾರ್ವಜನಿಕರು ದಂಡ ಕಟ್ಟಬೇಕಾಗುತ್ತದೆ. ನಾಲ್ಕು ಚಕ್ರದ ವಾಹನ ಚಾಲಕರು ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುವುದಲ್ಲದೇ ಪೊಲೀಸ್ ಸಿಬ್ಬಂದಿ ಜೊತೆಗೆ ವಾಗ್ವಾದ ಮಾಡುತ್ತಾರೆ ಎಂದು ಆರೋಪಿಸಿದ ಅವರು ರಸ್ತೆ ಅಪಘಾತಗಳನ್ನು ತಡೆಯಲು ಚಾಲಕರು ಯಾವುದೇ ರಾಜಿ ಇಲ್ಲದೇ ದಂಡ ಕಟ್ಟಬೇಕು ಎಂದರು.

ದಂಡ ಕಟ್ಟದ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಅವುಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜಕ್ಕರಾಯನ ಕೆರೆ, ಚಿಕ್ಕಜಾಲಹಳ್ಳಿ ಸೇರಿ ಮೂರು ಕಡೆ ನಿಲ್ಲಿಸಲು ಸ್ಥಳಾವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಟೋಲಿಂಗ್ ಕಟ್ಟುವ ದರ ಕೂಡ ಹೆಚ್ಚಿಸಲಾಗುವುದು ಎಂದರು

ಹೊಸ ನಿಯಮದಡಿ ಓರ್ವ ವ್ಯಕ್ತಿಯಿಂದ 17 ಸಾವಿರ ರೂ ದಂಡ ವಸೂಲಿ ಮಾಡಲಾಗಿದೆ. ಸದ್ಯದಲ್ಲಿಯೇ ಹೊಸ ಪರಿಷ್ಕೃತ ದಂಡ ರಸೀದಿ ಜಾರಿಗೆ ಬರಲಿದೆ. ನಗರದಲ್ಲಿ ಸಿಸಿ ಕ್ಯಾಮೆರಾ ಸಂಖ್ಯೆಗಳು ವಿರಳವಾಗಿದ್ದು, ಶೀಘ್ರದಲ್ಲೇ ಅವುಗಳ ಸಂಖ್ಯೆ ಹೆಚ್ಚಿಸಲಾಗುವುದು. 250 ಸಂಚಾರ ಗಡಿಗಳಿದ್ದು, ಅದರ ಸಂಖ್ಯೆಯೂ ಹೆಚ್ಚಿಸಲಾಗುವುದು ಎಂದರು

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರೊಂದಿಗೆ ಮುಂದಿನ ದಿನಗಳಲ್ಲಿ ಸಭೆ ಕರೆದು, ಈ ಬಗ್ಗೆ ಚರ್ಚಿಸಲಾಗುವುದು. ಬೆಂಗಳೂರಿನಲ್ಲಿ ವಾಹನ ನಿಲುಗಡೆಗೆ ಸ್ಪಷ್ಟ ನೀತಿ ಇಲ್ಲ. ಶೀಘ್ರವೇ ಬಿಬಿಎಂಪಿ ಆಯುಕ್ತರಿಗೆ ಈ ಕುರಿತು ಪತ್ರ ಬರೆಯಲಾಗುವುದು ಎಂದರು.

ಓಲಾ, ಊಬರ್ ಹಾಗೂ ಆಟೋರಿಕ್ಷಾಗಳು, ಮಕ್ಕಳು, ವಯಸ್ಕರ ಹಾಗೂ ಮಹಿಳೆಯರಿಗೆ ಸೇವೆ ಒದಗಿಸುವ ಬದಲು ಅಪರಾಧದಲ್ಲಿ ತೊಡಗಿದ್ದರೇ, ಕೂಡಲೇ ಅಂತಹ ಚಾಲಕರು ವೃತ್ತಿಯಿಂದ ಹೊರಹೋಗಬೇಕು ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.

ವಾಹನ ಪಾರ್ಕ್ ಮಾಡಿಕೊಳ್ಳಲು ತಮ್ಮ ಮನೆಗಳಲ್ಲಿ ನಾಗರಿಕರು ಮೊದಲು ಸ್ಥಳಾವಕಾಶ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ರಿಂಗ್ ರೋಡ್ ರಸ್ತೆಯಲ್ಲಿ ವಾಹನಗಳು ಹೆಚ್ಚು ವೇಗವಾಗಿ ಬರುತ್ತವೆ. ಅಪಘಾತವಾಗಿ ಪಾದಚಾರಿಗಳು ಮೃತಪಟ್ಟರೇ, 304 ಎ ಅಡಿ ದೂರು ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಇದೀಗ 304ಎ ಜೊತೆಗೆ 307 (ಕೊಲೆ ಯತ್ನ) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲು ಸೂಚಿಸಲಾಗಿದೆ ಎಂದರು

ಖಾಸಗಿ ಶಾಲೆಯ ವಾಹನಗಳನ್ನು ಶಾಲೆಯ ಹೊರಗಡೆ, ರಸ್ತೆಯಲ್ಲಿ ಪಾರ್ಕ್ ಮಾಡುತ್ತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಆದ್ದರಿಂದ ನಗರದ ಖಾಸಗಿ ಶಾಲಾ ‌ಮುಖ್ಯಸ್ಥರ ಸಭೆ ಕರೆದು, ಬಸ್​ಗಳನ್ನು ಶಾಲೆಯ ಒಳಗೆ ನಿಲ್ಲಿಸಿ ಅಥವಾ ನಿಮ್ಮ ಶಾಲೆಯನ್ನು ನಗರದ ಹೊರಗಡೆ ಸ್ಥಳಾಂತರಿಸಿ ಎಂದು ಸೂಚಿಸಲಾಗಿದ್ದು,  ಈಗಾಗಲೇ ಡಿಸಿಪಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದಾರೆ‌ ಎಂದರು.

ವ್ಯಾಪಾರ ಮಾಡಲು ಬಂದ ರೈತರಿಗೆ ದಂಡ ವಿಧಿಸುತ್ತಿರುವ ಕುರಿತು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ಗಡಿಭಾಗ ದೇವನಹಳ್ಳಿ ಹಾಗೂ ಆನೇಕಲ್ ಪ್ರದೇಶಗಳಲ್ಲಿನ ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಗುರುವಾರ ಮಧ್ನಾಹ್ನದವರೆಗೆ ಸಂಚಾರ ನಿಯಮ ಉಲ್ಲಂಘನೆಯಡಿ 2,978 ಪ್ರಕರಣಗಳು ದಾಖಲಾಗಿದ್ದು, 32.36 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com