ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಒಕ್ಕಲಿಗರ ಬೃಹತ್ ಪ್ರತಿಭಟನೆ: ಬಿಗಿ ಪೊಲೀಸ್ ಬಂದೋಬಸ್ತ್ 

ಡಿಕೆಶಿ ಮನೆಗೆ ಭೇಟಿ ನೀಡಿದ್ದ ಆದಿಚುಂಚನಗಿರಿ ಸ್ವಾಮೀಜಿ
ಡಿಕೆಶಿ ಮನೆಗೆ ಭೇಟಿ ನೀಡಿದ್ದ ಆದಿಚುಂಚನಗಿರಿ ಸ್ವಾಮೀಜಿ

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಲು ನಾನಾ ಒಕ್ಕಲಿಗ ಸಂಘಟನೆಗಳು ಮುಂದಾಗಿವೆ. ಒಕ್ಕಲಿಗ ಸಮುದಾಯದ ಶಕ್ತಿ ಪ್ರದರ್ಶನದ ರೂಪದಲ್ಲಿ ನಡೆಯುವ ಈ ಧರಣಿಗೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬೆಂಬಲಿಸಿವೆ.

ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ, ಡಿ.ಕೆ.ಶಿವಕುಮಾರ್‌ ಅಭಿಮಾನಿ ಬಳಗ, ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕಾಂಗ್ರೆಸ್‌ನಿಂದಲೂ ಈ ಧರಣಿ ಸಿದ್ಧತೆ ಸಂಬಂಧ ಮಾಜಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಅದರಂತೆ ಬುಧವಾರ ಬೆಳಗ್ಗೆ ನ್ಯಾಷನಲ್‌ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಲಿದ್ದಾರೆ.

ಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಹಲವು ಸಂಘಟನೆಗಳು ಪ್ರತಿಭಟನೆ ಹಾಗೂ ಮೆರವಣಿಗೆಗೆ ಅವಕಾಶ ಕೋರಿದ್ದು, ಸುತ್ತಮುತ್ತಲ ಜಿಲ್ಲೆಗಳಿಂದ ಸುಮಾರು 35 ರಿಂದ 40 ಸಾವಿರ ಜನರು ಪಾಲ್ಗೊಳ್ಳುವ ಮಾಹಿತಿಯಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದರು.
ಸಂಚಾರ ದಟ್ಟಣೆ ಉಂಟಾಗಬಹುದಾದ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ ಮಾರ್ಗದಲ್ಲೇ ಮೆರವಣಿಗೆ ನಡೆಯಬೇಕು. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸುವುದು, ಪಟಾಕಿ ಸಿಡಿಸುವುದು ಮಾಡಬಾರದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಸೇರಿ 15 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ. ಅಲ್ಲದೆ, ಪ್ರತಿಭಟನೆ ಆಯೋಜಕರಿಂದ ಹಣ ಸಹಿತ ಬಾಂಡ್‌ ಪೇಪರ್‌ ಮೇಲೆ ಸಹಿ ಪಡೆಯಲಾಗಿದೆ.

ಈ ಮಾರ್ಗದುದ್ದಕ್ಕೂ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದ್ದು, ಒಂದು ವೇಳೆ ಸಾರ್ವಜನಿಕರ ಶಾಂತಿಗೆ ಧಕ್ಕೆ ಬಂದರೆ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಹತ್ತು ಸಂಘಟನೆಗಳ ಮುಖಂಡರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪೊಲೀಸ್‌ ಆಯುಕ್ತರು ಎಚ್ಚರಿಕೆ ನೀಡಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ ಹೊರಡುವ ರ್ಯಾಲಿ ಸ್ವಾತಂತ್ರ್ಯ ಉದ್ಯಾನವನದವರೆಗೆ ಸುಮಾರು 5.2 ಕಿ.ಮೀಟರ್‌ ಮೆರವಣಿಗೆ ನಡೆಯಲಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಮೆರವಣಿಗೆ ನಡೆಯಲು ಮಹಿಳೆಯರು ಸೇರಿದಂತೆ ಒಂದು ಸಾವಿರ ಹೆಚ್ಚು ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳುವಂತೆ ಸಂಘಟನೆಗಳಿಗೆ ಸೂಚಿಸಲಾಗಿದೆ. ಪ್ರತಿಭಟನೆ ರ್ಯಾಲಿ ನಡೆಯುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಈ ಮಾರ್ಗಗಳಲ್ಲಿ ಆ್ಯಂಬುಲೆನ್ಸ್‌ ಸಂಚರಿಸದಂತೆ ಸೂಚಿಸಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕಾಂಗ್ರೆಸ್‌ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುವಂತೆಯೂ ಸೂಚಿಸಲಾಗಿದೆ. ಜೆಡಿಎಸ್‌ ನಾಯಕರೂ ಈ ಧರಣಿಯಲ್ಲಿ ಪಾಲ್ಗೊಳ್ಳುವಂತೆ ತಮ್ಮ ಕಾರ್ಯಕರ್ತರಿಗೆ ನಿರ್ದೇಶನ ನೀಡಿದ್ದಾರೆ. 

ನಾನಾ ಒಕ್ಕಲಿಗರ ಸಂಘಟನೆಯವರೂ ಭಾರಿ ಪ್ರಮಾಣದಲ್ಲಿ ಜನರನ್ನು ಸೇರಿಸಲು ತಯಾರಿ ಮಾಡಿಕೊಂಡಿದ್ದಾರೆ. ಕೆಲ ಧಾರ್ಮಿಕ ಮುಖಂಡರೂ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬಿಗಿ ಪೊಲೀಸ್‌ ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com