

ಬೆಂಗಳೂರು:ಮಾರ್ಚ್ 15ಕ್ಕೆ ಮುಗಿಯಬೇಕಾಗಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗಳು ಲಾಕ್ ಡೌನ್ ನ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿರುವುದರಿಂದ ಮೂರು ತಿಂಗಳ ವಿನಾಯ್ತಿಯನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ನೀಡಿದೆ.
ಕಳೆದ ವಾರ ರೇರಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಲ್ಡರ್ ಗಳು ಕೋವಿಡ್-19ನ ಲಾಕ್ ಡೌನ್ ನಿಂದ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಲು ಸಾಧ್ಯವಿಲ್ಲದಿರುವುದರಿಂದ 3 ತಿಂಗಳ ವಿನಾಯ್ತಿ ನೀಡಬೇಕೆಂದು ಕೋರಿದ್ದರು.
ಈ ಬಗ್ಗೆ ರೇರಾ ಸದಸ್ಯ ವಿಷ್ಣುವರ್ಧನ್ ರೆಡ್ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಈ ವರ್ಷ ಮಾರ್ಚ್ 15ಕ್ಕೆ ಮುಗಿಯಬೇಕಾಗಿದ್ದು ಮತ್ತು ಏಪ್ರಿಲ್ ನೊಳಗೆ ಮುಗಿಸುವ ನಿರ್ಮಾಣ ಯೋಜನೆಗಳಿಗೆ 3 ತಿಂಗಳ ವಿನಾಯ್ತಿ ನೀಡಲಾಗಿದೆ. ಇತ್ತೀಚೆಗೆ ಆರಂಭಗೊಂಡ ಇನ್ನು ನಾಲ್ಕೈದು ವರ್ಷಗಳಲ್ಲಿ ಮುಗಿಯುವ ಯೋಜನೆಗಳಿಗೆ ಈ ವಿನಾಯ್ತಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ವಸ್ತುಗಳ ಪೂರೈಕೆ, ಕಾರ್ಮಿಕರ ಕೊರತೆಯಿಂದ ಯೋಜನೆಗಳು ನಿಗದಿತ ಸಮಯಕ್ಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಲ್ಡರ್ ಗಳಿಗೆ ಮೂರು ತಿಂಗಳ ವಿನಾಯ್ತಿ ನೀಡಲಾಗಿದೆ ಎಂದರು.