ಉತ್ಪಾದನೆ ದುಪ್ಪಟ್ಟು, ಸರಬರಾಜು ಕೂಡ ದುಪ್ಪಟ್ಟು; ಆದರೂ ಮೆಡಿಕಲ್ ಸ್ಟೋರ್ ಗಳಲ್ಲಿ HCQ ಕೊರತೆ!

ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ)ಗೆ ನಗರದಲ್ಲಿ ಭಾರಿ ಕೊರತೆ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ)ಗೆ ನಗರದಲ್ಲಿ ಭಾರಿ ಕೊರತೆ ಎದುರಾಗಿದೆ.

ಹೈಡ್ರೋಕ್ಸಿಕ್ಲೋರೋಕಿನ್ ಉತ್ಪಾದನೆಯಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದ್ದು, ಇತ್ತೀಚೆಗಷ್ಟೇ ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ ವಿಶ್ವದ 130 ದೇಶಗಳು ಈ ಔಷಧಕ್ಕೆ ಬೇಡಿಕೆ ಇಟ್ಟಿದ್ದವು. ಅಂತೆಯೇ ಭಾರತ ಕೂಡ ಅಮೆರಿಕಕ್ಕೆ ದೊಡ್ಡ ಪ್ರಮಾಣದಲ್ಲಿ ಹೈಡ್ರೋಕ್ಸಿಕ್ಲೋರೋಕಿನ್ ಗಳನ್ನು  ರಫ್ತು ಮಾಡಿತ್ತು. ಅಲ್ಲದೆ ಭಾರತದಲ್ಲಿ ಇದರ ಉತ್ಪಾದನೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದಲ್ಲದೇ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಕೂಡ ಮಾಡಿದೆ. ಆದರೂ ಬೆಂಗಳೂರು ನಗರದಲ್ಲಿ ಈ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ)ಗೆ  ಭಾರಿ ಕೊರತೆ ಎದುರಾಗಿದ್ದು, ಖಾಸಗಿ ಫಾರ್ಮಾಸುಟಿಕಲ್ ಸಂಸ್ಥೆಗಳು ಈ ಔಷಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಬೇಡಿಕೆ ಹೆಚ್ಚಿಸಿ ದುಬಾರಿ ಬೆಲೆಗೆ ಮಾರಲು ಪ್ರಯತ್ನಿಸುತ್ತಿವೆ ಎಂಬ ಗಂಭೀರ ಶಂಕೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಕೆಲ ಪ್ರಮುಖ ಮೆಡಿಕಲ್ ಸ್ಟೋರ್ ಗಳಲ್ಲಿ ವಿಚಾರಿಸಲಾಗಿ ಅವರು ಈ ಮಾತ್ರೆಗಳ ಲಭ್ಯತೆ ಕಡಿಮೆ ಇದ್ದು, ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಈ ಮಾತ್ರೆಗಳನ್ನು ನೀಡುವಂತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಣಿಪಾಲ್ ಆಸ್ಪತ್ರೆಯ ಹಿರಿಯ ಶ್ವಾಸಕೋಶಶಾಸ್ತ್ರಜ್ಞ  ಡಾ.ಸತ್ಯನಾರಾಯಣ ಅವರು, ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ಈ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಇದಲ್ಲದೆ ಸಂಧಿವಾತ, ಲೂಪಸ್ ಮತ್ತು ಇತರೆ ಸಂಧಿವಾತ ಸಂಬಂಧಿತ ರೋಗಗಳ ಚಿಕಿತ್ಸೆಯಲ್ಲೂ ಇದನ್ನು ರೋಗಿಗಳಿಗೆ ನೀಡಲಾಗುತ್ತಿತ್ತು. ಆದರೆ ಇದೀಗ ಕೊರೋನಾ  ಚಿಕಿತ್ಸೆಗೂ ಇದನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಇವುಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಆದರೆ ಇದರಿಂದ ಸಾಮಾನ್ಯವಾಗಿ ಈ ಮಾತ್ರಗಳನ್ನು ಬಳಕೆ ಮಾಡುತ್ತಿದ್ದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ರೋಗಿಗಳು ತಮ್ಮ ಬಳಿ ಸಮಸ್ಯೆ ಹೇಳಿಕೊಂಡಿದ್ದು,  ಔಷಧಿ ಎಲ್ಲಿಯೂ ಸಿಗುತ್ತಿಲ್ಲ, ಹೀಗಾಗಿ ನೀವೆ ತರಿಸಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ನಾನೇ ಖುದ್ಧು ನಮ್ಮ ಆಸ್ಪತ್ರೆ ಫಾರ್ಮಸಿ ಸೇರಿದಂತೆ ಮೂರು ಮೆಡಿಕಲ್ ಸ್ಟೋರ್ ಗಳಿಗೆ ತೆರಳಿ ಈ ಬಗ್ಗೆ ವಿಚಾರಿಸಿದ್ದೆ. ಆದರೆ ಎಲ್ಲರೂ ಇದು ಔಟ್ ಆಫ್ ಸ್ಟಾಕ್, ಸರಬರಾಜಾಗುತ್ತಿಲ್ಲ ಎಂದು  ಹೇಳಿದರು. 

ಇನ್ನು ಬೆಂಗಳೂರಿನ ಹನು ರಾಮಸಂಜೀವ ಎಂಬುವವರು ಮಾತನಾಡಿ, ನನ್ನ ತಾಯಿಗೆ ಸಂಧಿವಾತವಿದ್ದು ಅವರಿಗೆ ವೈದ್ಯರು HCQ ಬಳಕೆ ಮಾಡುವಂತೆ ಸೂಚಿಸಿದ್ದರು. ನಾನು 30 ದಿನಗಳ ಕಾಲ ಈ ಮಾತ್ರೆಗಳನ್ನು ಬಳಸಿದ್ದೆ. ಬಳಿಕ ಎಲ್ಲೇ ವಿಚಾರಿಸಿದರೂ ಈ ಮಾತ್ರೆಗಳ ಲಭ್ಯತೆ  ಇರಲಿಲ್ಲ. ಅಂತಿಮವಾಗಿ ಒಂದು ಮೆಡಿಕಲ್ ಸ್ಟೋರ್ ನಲ್ಲಿ ಕೇವಲ ಒಂದೇ ಒಂದು ಶೀಟ್ ಲಭ್ಯವಾಯಿತು. ಅದು ಏಪ್ರಿಲ್ 9ರವರೆಗೆ ಸಾಕಾಯಿತು ಎಂದು ಹೇಳಿದರು, ಇನ್ನು ಕೆಲವರು ಈ HCQ ಬಗ್ಗೆ ಸುದ್ದಿಗಳು ಬಿತ್ತರವಾದ ಬೆನ್ನಲ್ಲೇ ರಾಶಿ ರಾಶಿ ಮಾತ್ರಗೆಳನ್ನು ಮನೆಯಲ್ಲೇ ದಾಸ್ತಾನು  ಮಾಡಿಟ್ಟುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮಾತ್ರೆಗಳ ಬೇಡಿಕೆ ಹೆಚ್ಚಿದೆ ನಿಜ. ಆದರೆ ಈ ಮಾತ್ರೆಗಳು ಎಲ್ಲರಿಗೂ ಲಭ್ಯವಾಗಬೇಕು. ಕೆಲವು ಫಾರ್ಮಾ ಸಂಸ್ಥೆಗಳು ಬೇಕೆಂದೇ ಈ ಮಾತ್ರೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕೃತಕ ಬೇಡಿಕೆ  ಸೃಷ್ಟಿಸಿ ಹೆಚ್ಚಿನ ಲಾಭ ಮಾಡುವ ದುರುದ್ದೇಶ ಹೊಂದಿವೆ. ಒಂದು ಸಂಸ್ಥೆಯಂತೂ ತಮ್ಮ ಬಳಿ ಸಾಕಷ್ಟು HCQ ಮಾತ್ರೆಗಳಿವೆ. ಎಸ್ ಎಂಎಸ್ ಮಾಡಿದರೆ ಜನರಿಗೆ ತಲುಪಿಸುತ್ತೇವೆ ಎಂದು ಹೇಳಿದೆ. ಇಂತಹ ಬೆಳವಣಿಗೆಗಳು ಅಪಾಯಕಾರಿಯಾದದ್ದು, ಇದಕ್ಕೆ ಸರ್ಕಾರ ಬ್ರೇಕ್ ಹಾಕಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com