ಕೇಂದ್ರ, ರಾಜ್ಯಗಳ ಗೋದಾಮಿನಲ್ಲಿ ಸಾಕಷ್ಟು HCQ ದಾಸ್ತಾನಿದೆ!

ವಿಶ್ವಾದ್ಯಂತ ಮಾರಕ ಕೊರೋನಾ ಆರ್ಭಟ ಮುಂದುವರೆದಿರುವಂತೆಯೇ ಇತ್ತ ವೈರಸ್ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ) ಮಾತ್ರೆಗಳ ಸಾಕಷ್ಟು ದಾಸ್ತಾನಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಶ್ವಾದ್ಯಂತ ಮಾರಕ ಕೊರೋನಾ ಆರ್ಭಟ ಮುಂದುವರೆದಿರುವಂತೆಯೇ ಇತ್ತ ವೈರಸ್ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ) ಮಾತ್ರೆಗಳ ಸಾಕಷ್ಟು ದಾಸ್ತಾನಿದೆ ಎಂದು ಹೇಳಲಾಗಿದೆ.

ಹೈಡ್ರೋಕ್ಸಿಕ್ಲೋರೋಕಿನ್ ಉತ್ಪಾದನೆಯಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದ್ದು, ಇತ್ತೀಚೆಗಷ್ಟೇ ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ ವಿಶ್ವದ 130 ದೇಶಗಳು ಈ ಔಷಧಕ್ಕೆ ಬೇಡಿಕೆ ಇಟ್ಟಿದ್ದವು. ಅಂತೆಯೇ ಭಾರತ ಕೂಡ ಅಮೆರಿಕಕ್ಕೆ ದೊಡ್ಡ ಪ್ರಮಾಣದಲ್ಲಿ ಹೈಡ್ರೋಕ್ಸಿಕ್ಲೋರೋಕಿನ್ ಗಳನ್ನು  ರಫ್ತು ಮಾಡಿತ್ತು. ಅಲ್ಲದೆ ಭಾರತದಲ್ಲಿ ಇದರ ಉತ್ಪಾದನೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದಲ್ಲದೇ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಕೂಡ ಮಾಡಿದೆ. 

ಇದಾಗ್ಯೂ ಭಾರತದ ವಿವಿಧ ನಗರಗಳಲ್ಲಿ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ) ಮಾತ್ರೆಗಳ ಕೃತಕ ಅಭಾವ ಸೃಷ್ಟಿಯಾಗಿದ್ದು, ಖಾಸಗಿ ಫಾರ್ಮಾಸುಟಿಕಲ್ ಸಂಸ್ಥೆಗಳು ಈ ಔಷಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಬೇಡಿಕೆ ಹೆಚ್ಚಿಸಿ ದುಬಾರಿ ಬೆಲೆಗೆ ಮಾರಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಳಿವೆ. ಇದಲ್ಲದೆ ಈ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಳ ಉತ್ಪಾದಕ ಸಂಸ್ಥೆಗಳಿಗೆ ತಮ್ಮ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. 

ದೇಶದಲ್ಲಿ ಒಟ್ಟಾರೆಯಾಗಿ ಉತ್ಪಾದನೆಯಾಗುವ ಒಟ್ಟಾರೆ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಳ ಪೈಕಿ ಐಪಿಸಿಎ ಲ್ಯಾಬೋರೇಟರಿ ಮತ್ತು ಜೈಡಸ್ ಕ್ಯಾಡಿಲಾ ಸಂಸ್ಥೆಗಳೇ ಶೇ.70ರಷ್ಟು ಉತ್ಪಾದನೆ ಮಾಡುತ್ತಿವೆ. ಇದಲ್ಲದೆ ಖ್ಯಾತ ಔಷಧಿ ತಯಾರಿಕಾ ಸಂಸ್ಥೆಗಳಾದ ಅಲೆಂಬಿಕ್, ಸಿಪ್ಲಾ ಮತ್ತು ವ್ಯಾಲೇಸ್ ಸಂಸ್ಥೆಗಳೂ ಕೂಡ ಹೈಡ್ರೋಕ್ಸಿಕ್ಲೋರೋಕಿನ್ ಔಷಧಿಯನ್ನು ಉತ್ಪಾದನೆ ಮಾಡುತ್ತಿವೆ. ಈ ಎಲ್ಲ ಸಂಸ್ಥೆಗಳು ಇದೀಗ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಳ ಉತ್ಪಾದನಾ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಿದ್ದು, ಈ ಬಗ್ಗೆ ಮಾತನಾಡಿರುವ ಐಪಿಸಿಎ ಲ್ಯಾಬೋರೇಟರಿಯ ಜಂಟಿ ನಿರ್ವಾಹಕ ನಿರ್ದೇಶಕ ಅಜಿತ್ ಕುಮಾರ್ ಜೈನ್ ಅವರು, ಪ್ರಸ್ತುತ ನಮ್ಮ ಲ್ಯಾಬ್ ನಲ್ಲಿ ಪ್ರತೀ ತಿಂಗಳು 20 ಟನ್ HCQ ಮಾತ್ರೆಗಳನ್ನು ಉತ್ಪಾದಿಸುತ್ತಿದ್ದು, ಅಂದರೆ ತಿಂಗಳಿಗೆ 10 ಕೋಟಿ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ಈ ಪ್ರಮಾಣವನ್ನು 26 ಟನ್ ಗೆ ಏರಿಕೆ ಮಾಡಿ ಅಂದರೆ 13 ಕೋಟಿ ಮಾತ್ರೆಗಳ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಅಂತೆಯೇ ಶೀಘ್ರದಲ್ಲೇ ಐಪಿಸಿಎ ಲ್ಯಾಬ್ ಕೇಂದ್ರ ಸರ್ಕಾರಕ್ಕೆ ಐದು ಕೋಟಿ ಮಾತ್ರೆಗಳನ್ನು ರವಾನೆ ಮಾಡುತ್ತಿದೆ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದ HCQ ದಾಸ್ತಾನಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಇದರ ಉತ್ಪಾದನೆ ಪ್ರಮಾಣ ಕೂಡ ಗಣನೀಯವಾಗಿ ಏರಿಕೆಯಾಗಲಿದ್ದು, ಇದಕ್ಕಾಗಿ ಸರ್ಕಾರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಕೊಡಿಸಬೇಕು ಎಂದು ಅಜಿತ್ ಕುಮಾರ್ ಜೈನ್ ಹೇಳಿದ್ದಾರೆ. ಇದೇ ವೇಳೆ ತಮ್ಮ ಸಂಸ್ಥೆ ಸಂಧಿವಾತ ರೋಗಿಗಳಿಗಾಗಿ ವಿಶೇಷ ಸಹಾಯವಾಣಿ ಕೂಡ ಆರಂಭಿಸಿದ್ದು, ರೋಗಿಗಳು ಮಾತ್ರೆಗಳು ಬೇಕಿದ್ದರೆ ಕರೆ ಮಾಡಿ ಪಡೆಯಬಹುದು. ನಮ್ಮ ಸಿಬ್ಬಂದಿ ಅವರಿಗೆ ನೆರವಾಗಲಿದ್ದಾರೆ ಎಂದು ಹೇಳಿದರು.

ಕೊರೋನಾ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ Hydroxychloroquine ಪರಿಣಾಮಕಾರಿ
ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ Hydroxychloroquine ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಪಟ್ಟಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಔಷಧಿಯ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಮಲೇರಿಯಾ  ಮತ್ತು ಲುಪಸ್ ಸೋಂಕಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ರೋಗ ನಿರೋಧಕವಾಗಿ ಕಾರ್ಯ ನಿರ್ವಹಿಸಲಿದ್ದು, ಇದೇ ಕಾರಣಕ್ಕೆ ಇದು ಕೊರೋನಾ ಸೋಂಕು ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕುರಿತು  ಯಾವುದೇ ವೈಜ್ಞಾನಿಕ ಸಂಶೋಧನೆ ಇದನ್ನು ಸಾಬೀತು ಮಾಡಿಲ್ಲ. ಆದರೆ ಫ್ರಾನ್ಲ್ ನಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಗಳಿಗೆ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಆ್ಯಂಟಿ ಬಯಾಟಿಕ್ ಮಾದರಿಯಲ್ಲಿ ನೀಡಲಾಗಿದ್ದು, ಇದು ರೋಗಿಗಳಲ್ಲಿ ಗಮನಾರ್ಹ ಸಕಾರಾತ್ಮಕ  ಬದಲಾವಣೆ ತಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಮುಖಸ್ಥಾನದಲ್ಲಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ನೊವೆಲ್ ಪಥಗಾನ್ ನಂತಹ ರೋಗಾಣುಗಳ ಮೇಲೆ ಪರಿಣಾಕಾರಿಯಾಗಿ  ಕಾರ್ಯನಿರ್ವಹಿಸುತ್ತದೆ. ಅಮೆರಿಕ ಮಾತ್ರವಲ್ಲದೇ ದಕ್ಷಿಣ ಕೊರಿಯಾ ಕೂಡ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಕೊರೋನಾ ವೈರಸ್ ಗೆ ಬದಲಿ ಔಷಧಿಯಾಗಿ ನೀಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಪಂಚದಾದ್ಯಂತ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ ವ್ಯಾಪಕ  ಬೇಡಿಕೆ ಸೃಷ್ಟಿಯಾಗಿದ್ದು, ಭಾರತ ಕೂಡ ಇದೇ ಕಾರಣಕ್ಕೆ ಈ ಔಷಧಿಯ ರಫ್ತು ನಿಷೇಧ ಮಾಡಿದೆ.

ಭಾರತದಲ್ಲಿಯೂ 550ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು ಇದೀಗ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತು ನಿಷೇಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com