

ಚಾಮರಾಜನಗರ: ಕೊವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳೆದ ಎಲೆಕೋಸನ್ನು ಮಾರಾಟ ಮಾಡಲಾಗದೆ ಟ್ವೀಟರ್ ನಲ್ಲಿ ಅಳಲು ತೋಡಿಕೊಂಡಿದ್ದ ರೈತನಿಗೆ ಹಲವಾರು ಮಂದಿ ಸ್ಪಂದಿಸಿದ್ದು, ಕೋಸು ಕೊಳ್ಳಲು ಮುಂದೆ ಬಂದಿದ್ದಾರೆ. ಈಗಾಗಲೇ 37 ಟನ್ ಕೋಸು ಮಾರಾಟ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಚಾಮರಾಜನಗರದ ವಡ್ಡರಹಳ್ಳಿಯ ಕಣ್ಣಿಯನ್ ಸುಬ್ರಮಣಿಯಮ್ ಎಂಬುವರು ಕೋಸು ಮಾರಾಟವಾಗದೇ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಟ್ವೀಟರ್ನಲ್ಲಿ ಅಳಲು ತೋಡಿಕೊಂಡು, ಕಾರ್ಪೋರೇಟ್ ದಿಗ್ಗಜರಾದ ರತನ್ ಟಾಟಾ ಹಾಗೂ ಆನಂದ ಮಹೀಂದ್ರಾಗೆ ಟ್ಯಾಗ್ ಮಾಡಿದ್ದರು.
ಹತ್ತಾರು ಸಾವಿರ ಮಂದಿ ನೆಟ್ಟಿಗರು ರೈತನ ಟ್ವೀಟ್ಗೆ ಪ್ರತಿಕ್ರಿಯಿಸಿದ್ದರು. 80 ಟನ್ನಷ್ಟು ಎಲೆಕೋಸಿನಲ್ಲಿ ಸಂಸದ ತೇಜಸ್ವಿ ಸೂರ್ಯ 12 ಟನ್, ಕುಮಾರಗುರು ಶಿಕ್ಷಣ ಸಂಸ್ಥೆ 3 ಟನ್, ವೇಕೂಲ್ ಸಂಸ್ಥೆ 8 ಟನ್, ಜಬೀವುಲ್ಲಾ ಎಂಬ ವ್ಯಾಪಾರಿ 10 ಟನ್, ದುಬೈನ ಅದ್ವೈತ್ ಠಾಕೂರ್ ಎಂಬುವರು 10 ಸಾವಿರ ರೂ. ಹಣ ನೀಡಿ 4 ಟನ್ ಕೋಸನ್ನು ಉಚಿತವಾಗಿ ವಿತರಿಸುವಂತೆ ಕೋರುವ ಮೂಲಕ ನಾಶವಾಗುತ್ತಿದ್ದ ರೈತನ ಬೆಳೆ ಮತ್ತು ಬಾಳಿಗೆ ಆಸರೆಯಾಗಿ ನಿಂತಿದ್ದಾರೆ.
ಇನ್ನೂ 50 ಟನ್ನಷ್ಟು ಕೋಸಿದ್ದು, ಹಲವಾರು ಮಂದಿ ಪ್ರತಿದಿನ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ನಾಶವಾಗುತ್ತಿದ್ದ ನನ್ನ ಬೆಳೆಯನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್ ಉಳಿಸಿದೆ. ಆಗುತ್ತಿದ್ದ ನಷ್ಟವನ್ನು ತಪ್ಪಿಸಿದೆ ಎಂದು ರೈತ ಸುಬ್ರಹ್ಮಣ್ಯಂ ಸಂತಸ ವ್ಯಕ್ತಪಡಿಸಿದ್ದಾರೆ.
-ಗುಳಿಪುರ ನಂದೀಶ