ಲಾಕ್ ಡೌನ್ ಸಡಿಲಿಕೆ ಬಗ್ಗೆ ಉದಾಸೀನ ಬೇಡ: ವಿಜಯ್ ಭಾಸ್ಕರ್

ಲಾಕ್ ಡೌನ್ ನಂತರ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಉದಾಸೀನತೆ ತೋರುವಂತಿಲ್ಲ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್‍ಭಾಸ್ಕರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯ್ ಭಾಸ್ಕರ್
ವಿಜಯ್ ಭಾಸ್ಕರ್

ಬೆಂಗಳೂರು: ಲಾಕ್ ಡೌನ್ ನಂತರ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಉದಾಸೀನತೆ ತೋರುವಂತಿಲ್ಲ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್‍ಭಾಸ್ಕರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಡನೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಲಾಕ್ ಡೌನ್ ನಿಂದ ಕೆಲವು ವಿನಾಯಿತಿ ನೀಡುವುದರಿಂದ ಸೋಂಕು ಪ್ರಕರಣಗಳು ಹೆಚ್ಚಾಗಬಹುದು, ಹಾಗಾಗಿ ರೋಗ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಕೇವಲ ಒಬ್ಬ ವ್ಯಕ್ತಿಯಿಂದ 24 ಜನರಿಗೆ ಕೊರೋನಾ ಸೋಂಕು ಹರಡಿದೆ. ಇದೇ ರೀತಿ ಮುಂದುವರಿದರೆ ಪ್ರಕರಣಗಳು ಹೆಚ್ಚಾಗುತ್ತವೆ. ಹಾಗಾಗಿ ಕೊರೋನಾ ಸೋಂಕಿತರೊಡನೆ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವುದು ಹಾಗೂ ಅವರ ಮೇಲೆ ನಿಗಾವಹಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಅವರು ತಿಳಿಸಿದರು.

ಲಾಕ್ ಡೌನ್ ಮುಗಿದ ನಂತರ ಹೊರ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಅವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಇಡಬೇಕಾಗುತ್ತದೆ. ಕ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾ ಹಾಗೂ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲು ಜಿಯೋ ಫೆನ್ಸಿಂಗ್ ಅನ್ನು ಕಾಲ್ ಸೆಂಟರ್ ಗಳಿಗೆ ಲಿಂಕ್ ಮಾಡಿ, ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರು ಜಿಯೋ ಫೆನ್ಸಿಂಗ್ ದಾಟಿದ ಕೂಡಲೇ ಅವರಿಗೆ ಕರೆ ಹೋಗುವಂತೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಈ ರೀತಿ ಮಾಡಿದರೆ ಸುಲಭವಾಗಿ ಸೋಂಕು ಹರಡದಂತೆ ತಡೆಗಟ್ಟಬಹುದಾಗಿದ್ದು ಈ ವ್ಯವಸ್ಥೆಯನ್ನು ಮುಂದಿನ ಮೂರು ದಿನಗಳಲ್ಲಿ ಹೆಚ್ಚು ಕೊರೋನಾ ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ಅಳವಡಿಸುವಂತೆ ನಿರ್ದೇಶನ ನೀಡಿದರು. 

ಕೊಳಗೇರಿಗಳಲ್ಲಿ ಕೊರೊನಾ ನಿಯಂತ್ರಣಾ ಕ್ರಮಗಳು ಸಮರ್ಪಕ ಜಾರಿಗೆ ಗಮನಹರಿಸುವಂತೆ ಹೇಳಿದ ಅವರು, ಹೆಚ್ಚು ಜನರಿಂದ ತುಂಬಿರುವ ಸ್ಥಳಗಳಲ್ಲಿ ಹೋಂ ಕ್ವಾರಂಟೈನ್ ಹೆಚ್ಚು ಫಲಕಾರಿಯಾಗುವುದಿಲ್ಲ. ಇಂತಹ ಸ್ಥಳಗಳನ್ನು ಪ್ರತಿದಿನ ವರದಿ ಮಾಡಿ ಕೆಮ್ಮು, ಜ್ವರ, ನೆಗಡಿ, ಉಸಿರಾಟದ ತೊಂದರೆಯ ಲಕ್ಷಣಗಳು ಇರವವರನ್ನು ಪ್ರತಿದಿನ ಪಟ್ಟಿ ಮಾಡಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದರು.

ಅಲ್ಲದೇ ಈ ರೀತಿ ರೋಗಲಕ್ಷಣಗಳು ಇರುವವರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, ಅಂತವರ ವರದಿಯನ್ನು ಕಡ್ಡಾಯವಾಗಿ ನೀಡುವಂತೆ ಜಂಟಿ ಸಭೆ ನಡೆಸಿ ಖಾಸಗಿ ಆಸ್ಪತ್ರೆಗಳಿಗೆ ಆದೇಶ ನೀಡುವಂತೆಯೂ ಹೇಳಿದರು. ಕೊರೋನಾ ಸೋಂಕಿತರೊಡನೆ ಪ್ರಥಮ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‍ನಿಂದ ಮನೆಗೆ ಕಳುಹಿಸಬೇಕಾದರೆ ಕೈಗೆ ಕ್ವಾರಂಟೈನ್ ಮುದ್ರೆ ಹಾಕಿ ಕಳುಹಿಸಿ. ಅಲ್ಲದೇ ಕ್ವಾರಂಟೈನ್‍ನಲ್ಲಿ ಇರುವವರ ಮನೆಗೆ ಸ್ಟಿಕ್ಕರ್ ಗಳನ್ನು ಕಡ್ಡಾಯವಾಗಿ ಅಂಟಿಸಿ. ಹೀಗೆ ಮಾಡುವುದರಿಂದ ಕ್ವಾರಂಟೈನ್ ವ್ಯಕ್ತಿಗಳು ಮನೆಯಿಂದ ಆಚೆ ಬಂದಲ್ಲಿ ಸಾರ್ವಜನಿಕರೇ ಸೂಚನೆ ನೀಡುವುದರ ಜೊತೆಗೆ, ಅವರು ಹೊರಗೆ ಬರದಂತೆ ನಿಗಾವಹಿಸುತ್ತಾರೆ. ಅಲ್ಲದೇ ಧಾರಕ ವಲಯ ಹಾಗೂ ಬಫರ್ ವಲಯಗಳನ್ನು ವೆಬ್‍ಸೈಟ್ ಮೂಲಕ ಗೂಗಲ್ ಮ್ಯಾಪ್‍ಗೆ ಲಿಂಕ್ ಮಾಡುವ ವ್ಯವಸ್ಥೆ ಮಾಡಿ ಎಂದು ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು.

ಸರ್ಕಾರದಿಂದ ನಿಯೋಜಿಸಲಾಗಿರುವ ಕ್ವಾರಂಟೈನ್ ಜಾಗಗಳಲ್ಲಿ ಒಬ್ಬೊಬ್ಬರಿಗೂ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಿ. ಒಟ್ಟಿಗೇ ಇದ್ದರೆ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಪಾದರಾಯನಪುರ ಪ್ರಕರಣದಲ್ಲಿ ಬಂಧಿಸಲಾಗಿರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸುವಂತೆ ಅವರು ಹೇಳಿದರು.

ಸುಮಾರು ಒಂದು ತಿಂಗಳಿಂದ ವಲಸೆ ಕಾರ್ಮಿಕರು ತಾವು ಕೆಲಸಕ್ಕೆ ಹೋದ ಸ್ಥಳಗಳಲ್ಲಿಯೇ ಉಳಿದುಕೊಂಡಿದ್ದಾರೆ, ಅವರನ್ನು ತಮ್ಮ ತಮ್ಮ ಜಿಲ್ಲೆಗಳಿಗೆ ಕಳಿಸುವ ವ್ಯವಸ್ಥೆ ಮಾಡುವುದು, ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಟಾಸ್ಕ್‍ಫೋರ್ಸ್‍ಗಳ ಮೂಲಕ ಪ್ರತಿದಿನ ವರದಿ ಮಾಡುವುದು ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜಯ್ ಭಾಸ್ಕರ್ ತಿಳಿಸಿದರು.

ಕೆಲವು ಜಿಲ್ಲೆಗಳಲ್ಲಿ ಮಾದರಿಗಳನ್ನು ಕಡಿಮೆ ಪ್ರಮಾಣದಲ್ಲಿ ಕಲೆಹಾಕಲಾಗುತ್ತಿದೆ. ಸಾಧ್ಯವಾದಷ್ಟು ಹೆಚ್ಚು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ. ಮಾಸ್ಕ್, ಪಿ.ಪಿ.ಇ ಕಿಟ್, ಪರೀಕ್ಷಾ ಕಿಟ್, ಆಮ್ಲಜನಕ ಮುಂತಾದ ಅಗತ್ಯ ಉಪಕರಣಗಳ ಕೊರತೆಯಿದ್ದಲ್ಲಿ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು.

ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕೊರೊನಾ ಸೋಂಕಿತರು ಹಾಗೂ ಶಂಕಿತರ ಆರೋಗ್ಯ ನಿರ್ವಹಣೆಗೆ ಪಲ್ಸ್ ಆಕ್ಸಿಮೀಟರ್ ಅಗತ್ಯವಿದೆ. ಪಲ್ಸ್ ಆಕ್ಸಿಮೀಟರ್ ಹೆಚ್ಚು ದುಬಾರಿಯೇನಲ್ಲ, ಹಾಗಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಇದನ್ನು ಕಾರ್ಯರೂಪಕ್ಕೆ ತನ್ನಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮೇ 3 ಕ್ಕೆ ಲಾಕ್ ಡೌನ್ ಸಡಿಲಗೊಳ್ಳುವುದರಿಂದ ಯಾವ ಯಾವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಡನೆ ಚರ್ಚೆ ಮಾಡಲಾಯಿತು. ಅಂತರ ರಾಜ್ಯ ಪ್ರಯಾಣ, ಧಾರ್ಮಿಕ ಆಚರಣೆಗಳು, ಮನೋರಂಜಾನಾ ಸ್ಥಳಗಳನ್ನು ಇನ್ನೂ ಒಂದೆರಡು ತಿಂಗಳುಗಳ ಕಾಲ ನಿರ್ಬಂಧಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಡಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಡಾ|| ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com