ಕೊರೋನಾ ವೈರಸ್ ನಿರ್ವಹಣೆ: ಕಲಬುರ್ಗಿ ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಕೆಲವೇ ಗಂಟೆಗಳಲ್ಲಿ ರದ್ದು, ಪ್ರಿಯಾಂಕ್ ಖರ್ಗೆ ಆಕ್ರೋಶ

ಕಲಬುರ್ಗಿ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಕೆಲವೇ ಗಂಟೆಗಳ ಅಂತರದಲ್ಲಿ ಈ ಆದೇಶವನ್ನು ಹಿಂಪಡೆದಿದೆ.
ಡಿಸಿ ಶರತ್ ಬಿ (ಸಂಗ್ರಹ ಚಿತ್ರ)
ಡಿಸಿ ಶರತ್ ಬಿ (ಸಂಗ್ರಹ ಚಿತ್ರ)

ಕಲಬುರಗಿ: ಕಲಬುರ್ಗಿ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಕೆಲವೇ ಗಂಟೆಗಳ ಅಂತರದಲ್ಲಿ ಈ ಆದೇಶವನ್ನು ಹಿಂಪಡೆದಿದೆ.

ಹೌದು.. ಉತ್ತಮ ನಿರ್ವಹಣೆ ಹೊರತಾಗಿಯೂ ಕೊರೋನಾ ವೈರಸ್ ವಿಚಾರವಾಗಿ ಟೀಕೆಗಳನ್ನು ಎದುರಿಸುತ್ತಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿತ್ತು. ಶರತ್ ಅವರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ  ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆಗೊಳಿಸಲಾಗಿತ್ತು. 2012ನೇ ಬ್ಯಾಚಿನ ಐಎಎಸ್‌ ಅಧಿಕಾರಿ ವಿಕಾಸ್ ಕಿಶೋರ್‌ ಸುರಳಕರ್ ಅವರನ್ನು ಜಿಲ್ಲಾಧಿಕಾರಿ ಹುದ್ದೆಗೆ ನೇಮಕ ಮಾಡಲಾಗಿತ್ತು. 

ಆದರೆ ಈ ವಿಚಾರವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದ ಹಿನ್ನಲೆಯಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವರ್ಗಾವಣೆ ಆದೇಶಕ್ಕೆ ತಡೆ ನೀಡಿದ್ದಾರೆ. 

ವರ್ಗಾವಣೆ ಬೆನ್ನಲ್ಲೇ ವ್ಯಾಪಕ ಟೀಕೆ
ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಜಿಲ್ಲಾಧಿಕಾರಿ ವರ್ಗಾವಣೆ ಸುದ್ದಿ ಸಾಕಷ್ಟು ಸದ್ದು ಮಾಡಿತು. ಹಲವು ಸಂಘಟನೆಗಳು ಖಂಡನಾ ಹೇಳಿಕೆಗಳನ್ನು ನೀಡಿದವು. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿರುವ, ಕೊರೋನಾ ಸೋಂಕನ್ನು ನಿಯಂತ್ರಿಸಲು  ನಿರಂತರವಾಗಿ ಶ್ರಮಿಸುತ್ತಿರುವ ಶರತ್ ಅವರನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳ ಮೂಲಕ ಹೊರಹೊಮ್ಮಿದವು. ಕೊರೋನಾ ಸೋಂಕು ತಡೆಗೆ ಆರಂಭದಲ್ಲಿ ಉತ್ಸುಕತೆಯಿಂದ ಕೆಲಸ ಮಾಡಿದ್ದ ಜಿಲ್ಲಾಧಿಕಾರಿ ಶರತ್‌, ಆ ನಂತರ  ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳೂ ಕೆಲವರಿಂದ ಕೇಳಿ ಬಂದವು. 

ಪ್ರಿಯಾಂಕ್ ಖರ್ಗೆ ಟೀಕೆ
ವರ್ಗಾವಣೆ ಆದೇಶ ಹೊರಡಿಸಿದ ಬೆನ್ನಲ್ಲೇ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಸರ್ಕಾರದ ಈ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿ ಸರಣಿ ಟ್ವೀಟ್‌ ಮಾಡಿದರು. ಅಧಿಕಾರಿಗಳ ವರ್ಗಾವಣೆಯಂತಹ ಸುಲಭ ಮಾರ್ಗದಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಅಲ್ಲದೇ, ಇದರಿಂದ  ಅಧಿಕಾರಿಗಳಲ್ಲಿ ತಪ್ಪು ಸಂದೇಶ ಹೋಗಲಿದೆ ಎಂದು ಎಚ್ಚರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com