ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಲೆ ಎತ್ತಿದ್ದ 12 ವರ್ಷಕ್ಕಿಂತಲೂ ಹಳೆಯದಾದ 1,200 ಅನಧಿಕೃತ ಕಟ್ಟಡಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳು ಗುರ್ತಿಸಿದ್ದಾರೆ.
ದಂಡವನ್ನು ಪಾವತಿಸಿದ ವೇಳೆ ಕಟ್ಟಡಗಳನ್ನು ಕ್ರಮಬದ್ಧಗೊಳಿಸಿ ಅನುಮತಿ ನೀಡುವಂತೆ ರಾಜ್ಯ ಸರ್ಕಾರ 2 ತಿಂಗಳ ಹಿಂದಷ್ಟೇ ಬಿಡಿಎ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಪ್ರಸಕ್ತ ಸಾಲಿನ ಮೇ 28 ರಂದು ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯ ಸೆಕ್ಷನ್ 38 (ಡಿ) ಗೆ ತಿದ್ದುಪಡಿ ತರಲಾಗಿತ್ತು.
ಬಳಿಕ ಜೂನ್ 1, 2008 ರ ನಂತರ ನಿರ್ಮಿಸಲಾದ ಅಕ್ರಮ ರಚನೆಗಳನ್ನು ನೆಲಸಮ ಮಾಡುವುದನ್ನು ಒಳಗೊಂಡಿರುವ ಪ್ರಕ್ರಿಯೆ ರ್ಣಗೊಳಿಸಲು ಬಿಡಿಎಗೆ ಎರಡು ವರ್ಷ ಕಾಲಾವಕಾಶ ನೀಡಲಾಗಿತ್ತು.
ಬಿಡಿಎ ಆಯುಕ್ತ ಮಹದೇವ್ ಅವರು ಮಾತನಾಡಿ, ಕೇವಲ 2 ಪ್ರದೇಶಗಳಲ್ಲಿಯೇ ನಿರ್ಮಾಣಗೊಂಡಿದ್ದ 1,200 ಅನಧಿಕೃತ ಕಟ್ಟಡಗಳನ್ನು ಗುರ್ತಿಸಲಾಗಿದೆ. ಹೆಚ್ಎಸ್ಆರ್ ಲೇಔಟ್ ನಲ್ಲಿಯೇ 515 ಅಕ್ರಮ ಕಟ್ಟಡಗಳು ಕಂಡು ಬಂದಿದೆ. ಇನ್ನು ಪಿಳ್ಳಣ್ಣ ಗಾರ್ಡೆನ್ 3ನೇ ಹಂತದಲ್ಲಿ 695 ಕಟ್ಟಡಗಳು ಕಂಡು ಬಂದಿವೆ. ದಂಡಗಳನ್ನು ವಿಧಿಸಿ ಸಂಗ್ರಹಿಸಿದ ಬಳಿಕ ಕಟ್ಟಡಗಳನ್ನು ಕ್ರಮಬದ್ಧಗೊಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
2020 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಸುಗ್ರೀವಾಜ್ಞೆ ಪ್ರಕಾರ, ಕಟ್ಟಡಗಳು ಅವುಗಳ ಅಳತೆಗೆ ಅನುಗುಣವಾಗಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. 20x30 ಚದರ ಅಡಿಯಿರುವ ಕಟ್ಟಡಗಳಿಗೆ ಶೇ.10%, 30x40 ಚದರ ಅಡಿಯಿರುವ ಕಟ್ಟಡಗಳಿಗೆ ಶೇ.25%, 60x40 ಚದರ ಅಡಿ ಇರುವ ಕಟ್ಟಡಗಳಿಗೆ ಶೇ.40, 40x60 ಚದರ ಅಡಿಗಿಂತ ದೊಡ್ಡದಾದ ಮತ್ತು 50x80 ಚದರ ಅಡಿಗಳಷ್ಟಿನ ಕಟ್ಟಡಗಳಿಗೆ ಶೇ.50% ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.
ಕಾರ್ಯಾಚರಣೆ ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಕಾರ್ಯಾಚರಣೆ ಮತ್ತಷ್ಟು ಸಮಯ ತೆಗೆದುಕೊಳ್ಳುತ್ತದೆ. ನಗರದಲ್ಲಿ 64 ಲೇಔಟ್ ಗಳಿದ್ದು, ಎಲ್ಲೆಡೆ ಕಾರ್ಯಾಚರಣೆ ನಡೆಯುತ್ತಿವೆ. “ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್‌ನ ನಕ್ಷೆಗಳನ್ನು ಬಳಕೆ ಮಾಡುವ ಮೂಲಕ ಕಟ್ಟಡಗಳ ಸ್ಥಿತಿ ಮತ್ತು ಅವುಗಳ ಅಕ್ರಮಗಳನ್ನು ನಿರ್ಧರಿಸಲಾಗುತ್ತಿದೆ. ನಮ್ಮ ಸಿಬ್ಬಂದಿಗಳು ವೇಗಗತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಡುವಿನ ಒಳಗೆ ಕಾರ್ಯಾಚರಣೆ ಪೂರ್ಣಗೊಳಿಸುವ ವಿಶ್ವಾಸವಿದೆ. ತಮ್ಮ ಕಟ್ಟಡಗಳನ್ನು ಕ್ರಮಬದ್ಧಗೊಳಿಸಲು ಸಾಕಷ್ಟು ಮಾಲೀಕರು ದಂಡ ಕಟ್ಟಲು ಸಿದ್ಧರಿದ್ದಾರೆಂದು ತಿಳಿಸಿದ್ದಾರೆ.
Advertisement