ಕಳಸಾ-ಬಂಡೂರಿ ಯೋಜನೆ: ಗೋವಾ ಸರ್ಕಾರದ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ
ಬೆಳಗಾವಿ: ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಕಳಸಾ-ಬಂಡೂರಿ ನಾಲಾ ಯೋಜನೆ ಸಂಬಂಧ ಗೋವಾ ಸರ್ಕಾರ ಸಲ್ಲಿಕೆ ಮಾಡಿದ್ದ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ತಾನು ಸಲ್ಲಿಕೆ ಮಾಡಿರುವ ತಕಾರಾರು ಅರ್ಜಿಯ ಇತ್ಯರ್ಥವಾಗುವರೆಗೂ ಯೋಜನೆಗೆ ಅನುಮೋದನೆ ನೀಡದಂತೆ ಗೋವಾ ಸರ್ಕಾರ ಸಲ್ಲಿಕೆ ಮಾಡಿದ್ದ ಮನವಿಯನ್ನುಕೇಂದ್ರದ ಜಲಶಕ್ತಿ ಸಚಿವಾಲಯ ತಳ್ಳಿ ಹಾಕಿದೆ.
ಇನ್ನು ಅತ್ತ ಕೇಂದ್ರ ಸರ್ಕಾರ ತನ್ನ ಮನವಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಗೋವಾ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರ ಗೋವಾ ಸರ್ಕಾರದ ಬೆನ್ನಿಗೆ ಚೂರಿ ಇರಿದಿದೆ. ನಮ್ಮ ನಂಬಿಕೆಗಳಿಗೆ ದ್ರೋಹ ಮಾಡಿದ್ದು, ಕೂಡಲೇ ಸಿಎಂ ಪ್ರಮೋದ್ ಸಾವಂತ್ ಸರ್ಕಾರ ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ದಾಖಲಿಸಬೇಕು. ಅಲ್ಲದೆ ಯಾವುದೇ ಕಾರಣಕ್ಕೂ ಮಹದಾಯಿ ನದಿ ನೀರಿನ ಹರಿವಿನ ಮಾರ್ಗವನ್ನು ಬದಲಾವಣೆ ಮಾಡಬಾರದು ಎಂದು ಆಗ್ರಹಿಬೇಕು ಎಂದು ಹೇಳಿದ್ದಾರೆ. ಅಲ್ಲದೆ ಸಿಎಂ ಸಾವಂತ್ ವಿರುದ್ಧವೂ ಕಿಡಿಕಾರಿರುವ ವಿಪಕ್ಷ ನಾಯಕರು ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಸಾವಂತ್ ಸರ್ಕಾರ ಯಾವುದೇ ರೀತಿಯ ಪ್ರಮುಖ ನಡೆ ಅನುಸರಿಸುತ್ತಿಲ್ಲ ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿನೋದ್ ಪಾಲೇಕರ್ ಹೇಳಿದ್ದಾರೆ.
ಮನೋಹರ್ ಪರಿಕ್ಕರ್ ಅವರು ಸಿಎಂ ಆಗಿದ್ದಾಗ ಕರ್ನಾಟಕ ಮಹದಾಯಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕರ್ನಾಟಕದ ಎಲ್ಲ ಕಾಮಗಾರಿಗಳನ್ನೂ ಸ್ಥಗಿತ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿಯ ನಡೆ ಸಾವಂತ್ ಸರ್ಕಾರದಿಂದ ಆಗಬೇಕಿದೆ. ಗೋವಾ ಹಿತಾಸಕ್ತಿ ಕಾಪಾಡುವಲ್ಲಿ ಸಾವಂತ್ ಸರ್ಕಾರ ಹಿಂದೆ ಬೀಳುತ್ತಿದೆ ಎಂದೂ ಪಾಲೇಕರ್ ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ