ಶೀಘ್ರದಲ್ಲೇ ನಮ್ಮ ಮೆಟ್ರೋ ಸೇವೆ ಪುನಾರಂಭ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಕೊರೋನಾ ಸಾಂಕ್ರಾಮಿಕದ ನಡುವೆಯೂ ಜನಜೀವನವನ್ನು ಸಹಜಸ್ಥಿತಿಗೆ ಹಂತ ಹಂತವಾಗಿ ತರಲಾಗುತ್ತಿದೆ. ಎಲ್ಲಾ ಮುಂಜಾಗೃತಾ ಕ್ರಮ ಕೈಗೊಂಡು, ಮೆಟ್ರೋ ಸೇವೆಯನ್ನು ಕೂಡ ಶೀಘ್ರವೇ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Updated on: 

ಬೆಂಗಳೂರು: ಕೊರೋನಾ ಸಾಂಕ್ರಾಮಿಕದ ನಡುವೆಯೂ ಜನಜೀವನವನ್ನು ಸಹಜಸ್ಥಿತಿಗೆ ಹಂತ ಹಂತವಾಗಿ ತರಲಾಗುತ್ತಿದೆ. ಎಲ್ಲಾ ಮುಂಜಾಗೃತಾ ಕ್ರಮ ಕೈಗೊಂಡು, ಮೆಟ್ರೋ ಸೇವೆಯನ್ನು ಕೂಡ ಶೀಘ್ರವೇ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನ ಮೇಲ್ಸೇತುವೆಗೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಇದಕ್ಕೂ ಮುನ್ನ ಮೆಜೆಸ್ಟಿಕ್ ಬಸ್ಸು ನಿಲ್ದಾಣ ಬಳಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ  ಕಾಲ್ನಡಿಗೆಯಲ್ಲೇ ತೆರಳಿ ಮೇಲ್ಸೇತುವೆ ಉದ್ಘಾಟನೆ ಮಾಡಿದರು.

ಮುಖ್ಯಮಂತ್ರಿ ಮಾತನಾಡಿ, ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿದೆ. ಮೇಲ್ಸೇತುವೆಗೆ ರಾಯಣ್ಣ ಹೆಸರು ನಾಮಕರಣ ಮಾಡಿದ್ದೇವೆ ಸ್ವಾತಂತ್ರ್ಯ ದಿನದಂದೇ ಹುಟ್ಟಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡದ ಕಲಿ. ಕಿತ್ತೂರು ರಾಣಿ ಚೆನ್ನಮ್ಮ ಅವರ ಬಲಗೈ ಬಂಟರಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕೊನೆಯ ಉಸಿರು ಇರುವವರೆಗೂ ಹೋರಾಟ ನಡೆಸಿದವರು. ರಾಯಣ್ಣ ನಮ್ಮ ಯುವ ಜನತೆಗೆ ಅತ್ಯುತ್ತಮ ಸ್ಫೂರ್ತಿಯಾಗಲಿ. ಇಂತಹ ಮಹಾನ್ ವ್ಯಕ್ತಿಯ ಹೆಸರು ಮೇಲ್ಸೇತುವೆ ಇಟ್ಟಿರುವುದು ಔಚಿತ್ಯಪೂರ್ಣವಾಗಿದೆ ಎಂದರು.

ಬೆಂಗಳೂರು ಮೂಲಭೂತ ಸೌಕರ್ಯ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಬೆಂಗಳೂರಿಗೆ ಹೆಚ್ಚಿನ ಆದ್ಯತೆ ಕೊಡುವುದು ರಾಜ್ಯ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಾಗಿದೆ. ನಗರದ ವಾಹನ ದಟ್ಟಣೆ ನಿವಾರಿಸಲು ಈ ಮೇಲ್ಸೇತುವೆ ಸಹಕಾರಿಯಾಗಲಿದೆ. ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಬೆಳೆಗಾವಿ ಪ್ರತಿಮೆ ಗಲಾಟೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ನಿನ್ನೆ ಸ್ವಾಮೀಜಿಗಳು ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಉಸ್ತುವಾರಿ ಸಚಿವರಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ. ಇಂದು ಸಚಿವರು ಸಭೆ ನಡೆಸಿ ಗೊಂದಲ ಪರಿಹಾರ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.

ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ,  ಗಾಂಧಿನಗರ ಕ್ಷೇತ್ರದಲ್ಲಿ ರಾಯಣ್ಣ ಸ್ಮರಣೆ ‌ಮಾಡುವ ಸ್ಮಾರಕಗಳು ಬಂದಿರುವುದು ಸಂತಸದ ವಿಚಾರ. ಬೆಳಗಾವಿ ಬಿಟ್ಟರೆ ಗಾಂಧಿನಗರ ಕ್ಷೇತ್ರದಲ್ಲಿ ಅತೀ ಹೆಚ್ಚು ಸ್ಮಾರಕಗಳು ಇವೆ.  ಮೇಲುಸೇತುವೆಗೆ ಒಂದು ವರ್ಷದ ಹಿಂದೆಯೇ ಹೆಸರು ಇಡಲಾಗಿದ್ದು, ಇಂದು ಅಧಿಕೃತ ಉದ್ಘಾಟನೆ ಆಗಿದೆ ಎಂದರು.

ಬೆಳಗಾವಿ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಓಕಳಿಪುರಂ ಮೇಲುಸೇತುವೆ ಈಗಾಗಲೇ ಚಲಾವಣೆಯಲ್ಲಿ ಇದೆ. ಮೂರ್ನಾಲ್ಕು ತಿಂಗಳು ಎಲ್ಲಾ ಕೆಲಸ ಮುಗಿಯಲಿದೆ ಎಂದರು.

ಇದಕ್ಕೂ ಮೊದಲು ಸಚಿವ ಈಶ್ವರಪ್ಪ ಮಾತನಾಡಿ,  ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರದಲ್ಲಿ ಕಾಗಿನೆಲೆ ಶ್ರೀಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಸಿದ್ಧವಿದೆ. ಆದಷ್ಟು ಬೇಗ ಈ ವಿವಾದ ಬಗೆಹರಿಸುತ್ತೇವೆ. ತಾವು ಕೂಡ ಬೆಳಗಾವಿಗೆ ತೆರಳುತ್ತೇನೆ ಎಂದರು.

ಟಿಪ್ಪು ಸುಲ್ತಾನ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ,  ಅದು ಮುಗಿದ ವಿಚಾರ. ಈ ನೆಲದಲ್ಲಿ ಅನೇಕರು ಹುಟ್ಟಿದ್ದಾರೆ. ಅನೇಕರು ಸತ್ತಿದ್ದಾರೆ. ವಿಶ್ವನಾಥ್ ಈಗಷ್ಟೇ ಬಿಜೆಪಿಗೆ ಬಂದಿದ್ದಾರೆ.  ಅವರು ಈ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ತಾವು ವಿಶ್ವನಾಥ್ ರವರ ಜೊತೆ ಮಾತನಾಡುತ್ತೇನೆ ಎಂದರು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಅನಾಮಧೇಯ ಹೆಸರಿನಲ್ಲಿ ಬೀಜಗಳು ಬರುತ್ತಿವೆ ಎಂಬ ವಿಚಾರ ಈಗ ಗೊತ್ತಾಯಿತು.  ಇದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ, ಸಚಿವ ಭೈರತಿ ಬಸವರಾಜ್, ಸ್ಥಳೀಯ ಶಾಸಕ  ದಿನೇಶ್ ಗುಂಡೂರಾವ್, ಮೇಯರ್ ಗೌತಮ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com