ಕಾರು ಖರೀದಿಸುತ್ತಿದ್ದೀರಾ? ಹಾಗಾದರೆ ನಿಲುಗಡೆಗೆ ಸ್ಥಳಾವಕಾಶ ಇರುವ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಿ!

ರಾಜಧಾನಿ ಬೆಂಗಳೂರಿನಲ್ಲಿ ವಾಹನ ಖರೀದಿ ಮಾಡಲು ಮುಂದಾಗಿರುವವರು ಇನ್ನು ಮುಂದೆ ಈ ಅಂಶಗಳನ್ನು ಗಮನಿಸಲೇಬೇಕಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನುಂದೆ ವಾಹನ ಖರೀದಿಗೆ ಮುಂದಾಗುವವರು ಸ್ವಂತ ಸ್ಥಳಾವಕಾಶ ಹೊಂದಿರುವ ಬಗ್ಗೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಹನ ಖರೀದಿ ಮಾಡಲು ಮುಂದಾಗಿರುವವರು ಇನ್ನು ಮುಂದೆ ಈ ಅಂಶಗಳನ್ನು ಗಮನಿಸಲೇಬೇಕಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನುಂದೆ ವಾಹನ ಖರೀದಿಗೆ ಮುಂದಾಗುವವರು ಸ್ವಂತ ಸ್ಥಳಾವಕಾಶ ಹೊಂದಿರುವ ಬಗ್ಗೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕಿದೆ. 

ಸ್ವಂತ ಸ್ಥಳಾವಕಾಶ ಹೊಂದಿರುವ ಬಗ್ಗೆ ದೃಢೀಕರಣ ಕಡ್ಡಾಯ, ವಸತಿ ಪ್ರದೇಶದಲ್ಲಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪರವಾನಗಿ ವ್ಯವಸ್ಥೆ, ಸಂಚಾರ ಆಧಾರಿತ ಅಭಿವೃದ್ಧಿ ಪ್ರದೇಶದಲ್ಲಿ ಪಾರ್ಕಿಂಗ್ ಮಾನದಂಡ ಸಡಿಲೀಕರಣ, ಸಾರಿಗೆ ಕೇಂದ್ರ ಮತ್ತು ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಇರುವ, ಹೆಚ್ಚಿನ ವಾಹನ ದಟ್ಟಣೆ ಹಾಗೂ ನಗರ ಸಾರಿಗೆ ಸಂಚಾರಿ ರಸ್ತೆಗಳಲ್ಲಿ ಪಾರ್ಕಿಂಗ್ ನಿರ್ಬಂಧ ವಿಧಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ನೂತನ ಪಾರ್ಕಿಂಗ್ ನೀತಿ 2.0 ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. 

ನೀತಿ ಜಾರಿ ಕುರಿತು ನಿನ್ನೆಯಷ್ಟೇ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ನೀತಿ ಕುರಿತು ಅಧಿಕಾರಿಗಳು ವಿವರಿಸಿದರು. 

ಬಳಿಕ ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ನೀತಿ ಪರಾಮರ್ಶಿಸಿ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರಿಗೆ ಸೂಚಿಸಿದರು. 

ಬೆಂಗಳೂರಿನಲ್ಲಿ ಪ್ರಸ್ತುತ 84.6 ಲಕ್ಷ ವಾಹನಗಳಿವೆ. ಪ್ರತೀವರ್ಷ ಸರಾಸರಿ 750ಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದಾರೆ. ಅಡ್ಡಾದಿಡ್ಡಿ ರಸ್ತೆ ಪಾರ್ಕಿಂಗ್'ನಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ನಿಯಂತ್ರಿತ, ತಂತ್ರಜ್ಞಾನ ಆಧಾರಿತ ಪಾರ್ಕಿಂಗ್ ವ್ಯವಸ್ಥೆ ರೂಪಿಸಲು ಪಾರ್ಕಿಂಗ್ ನೀತಿ 2.0 ರೂಪಿಸಲಾಗಿದೆ. 

ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ ಹೋಗಿದೆ. ಕೋಲ್ಕತಾ, ದೆಹಲಿ ಹಾಗೂ ಚೆನ್ನೈನಂತಹ ಮೆಟ್ರೋ ಸಿಟಿಗಳಿಗಿಂತಲೂ ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ದುಪ್ಪಾಟ್ಟಾಗಿದೆ. ಆದರೆ, ಇವುಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳಿಲ್ಲ. ಜನರು ರಸ್ತೆಬದಿಯಲ್ಲಿ ವಾಹನ ನಿಲುಗಡೆ ಮಾಡುವುದನ್ನು ಬಿಡುತ್ತಿಲ್ಲ. ಹೀಗಾಗಿ ರಸ್ತೆ ಬದಿಯಲ್ಲಿ ಜನರು ವಾಹನಗಳ ಪಾರ್ಕಿಂಗ್ ಮಾಡುವುದನ್ನು ನಿಲ್ಲಿಸಬೇಕಿದೆ. ಬಿಝಿ ಇರುವಂತಹ ರಸ್ತೆಗಳಲ್ಲಿ ಎರಡೂ ಬದಿಗಳಲ್ಲಿ ಡಬಲ್ ಪಾರ್ಕಿಂಗ್ ಮಾಡುವುದು, ಮನೆಗಳ ಮುಂದೆ ಪಾರ್ಕಿಂಗ್ ಮಾಡುವುದನ್ನು ತಡೆಯಬೇಕಿದೆ ಎಂದು ಬಿಡಿಎ ಮುಖ್ಯಸ್ಥ ಎಸ್.ಆರ್.ವಿಶ್ವನಾಥ್ ಅವರು ಹೇಳಿದ್ದಾರೆ. 

ಇಂತಹ ಅನಿಯಮಿತ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಸಲಹೆಗಳನ್ನು ನೀಡಿದೆ. ಈ ಕೆಲವು ಕ್ರಮಗಳು ಸಾರ್ವಜನಿಕರಿಗೆ ಕೆಲವು ಅನಾನುಕೂಲತೆಯನ್ನು ಉಂಟುಮಾಡಬಹುದು, ಆದರೆ ನಾವು ಅವುಗಳನ್ನು ಕಾರ್ಯಗತಗೊಳಿಸಲೇಬೇಕಿದೆ ಎಂದು ತಿಳಿಸಿದ್ದಾರೆ. 

ಖಾಲಿ ಸೈಟ್ ಗಳ ಮಾಲೀಕರು ಹಾಗೂ ಬಿಬಿಎಂಪಿ ನಡುವಿನ ಸಹಭಾಗಿತ್ವದಲ್ಲಿ ಖಾಲಿ ಇರುವ ಸೈಟ್'ಗಳಲ್ಲಿ ಪಾರ್ಕಿಂಗ್'ಗಳಿಗೆ ಸ್ಥಳಾವಕಾಶ ಕಲ್ಪಿಸಲು ಕೆಲ ಸಲಹೆಗಳೂ ಕೂಡ ಬಂದಿವೆ. ಪಾರ್ಕಿಂಗ್ ಸಮಸ್ಯೆ ಬಗೆಹರಿಸುವ ಸಲುವಾಗಿ ಈಗಾಗಲೇ “ಬಹು-ಹಂತದ ಪಾರ್ಕಿಂಗ್ ರಚನೆಗಳನ್ನು ನಿರ್ಮಿಸಲಾಗಿದೆ, ಆದರೆ ಜನರು ಅವುಗಳನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ಜನರು ನಿಲುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅಂತಹ ಬಹು-ಪಾರ್ಕಿಂಗ್ ಸೌಲಭ್ಯಗಳ 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲು ನಿರ್ಧರಿಸಿದ್ದೇವೆ. 

ಪ್ರಸ್ತುತ ನಗರದಲ್ಲಿರುವ ಖಾಲಿಯಿರುವ ಸರ್ಕಾರಿ ಸ್ಥಳಗಳನ್ನು ಪಾರ್ಕಿಂಗ್ ತಾಣಗಳಾಗಿ ಪರಿವರ್ತಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ವಾಹನ ಖರೀದಿ ಮಾಡುವವರು ಪಾರ್ಕಿಂಗ್'ಗೆ ಸ್ಥಳಾವಕಾಶ ಇರುವ ಕುರಿತು ದೃಢೀಕರಣ ಪತ್ರ ಸಲ್ಲಿಸಲು ನಿಯಮ ರೂಪಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ ಎಂದಿದ್ದಾರೆ. 

ನಗರದಲ್ಲಿ ಪ್ರಸ್ತುತ 80-85 ಸ್ಥಳಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಶುಲ್ಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿ ನಗರದ ಎಲ್ಲಾ ಕಡೆ ಶುಲ್ಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸುವ ಅನಿವಾರ್ಯತೆ ಇದೆ. ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆ ಉತ್ತೇಜಿಸುವುದು. ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com