ಬೆಂಗಳೂರಿನ ವಾರ್ಡ್ ಗಳನ್ನು 243 ಕ್ಕೆ ಏರಿಸುವ ಮಸೂದೆ ಅಂಗೀಕಾರ

ಬೆಂಗಳೂರು ನಗರದ ವಾರ್ಡ್ ಗಳನ್ನು 243 ಕ್ಕೆ ಏರಿಕೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ-2020 ನ್ನು ಕರ್ನಾಟಕ ಸರ್ಕಾರ ವಿಧಾನಮಂಡಲ ಅಧಿವೇಶನದಲ್ಲಿ ಡಿ.10 ರಂದು ಅಂಗೀಕರಿಸಿದೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬೆಂಗಳೂರು ನಗರದ ವಾರ್ಡ್ ಗಳನ್ನು 243 ಕ್ಕೆ ಏರಿಕೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ-2020 ನ್ನು ಕರ್ನಾಟಕ ಸರ್ಕಾರ ವಿಧಾನಮಂಡಲ ಅಧಿವೇಶನದಲ್ಲಿ ಡಿ.10 ರಂದು ಅಂಗೀಕರಿಸಿದೆ.

ವಿಪಕ್ಷಗಳ ಸದಸ್ಯರ ಅನುಪಸ್ಥಿತಿಯಲ್ಲಿ ಮಸೂದೆ ಅಂಗೀಕಾರಗೊಂಡಿದೆ. ಮಸೂದೆಯ ಬಗ್ಗೆ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಈ ಮಸೂದೆಯ ಉದ್ದೇಶ ಬೆಂಗಳೂರಿನ 198 ವಾರ್ಡ್ ಗಳನ್ನು 243 ಕ್ಕೆ ಏರಿಕೆ ಮಾಡುವುದಷ್ಟೆ ಅಲ್ಲದೇ ಬಿಬಿಎಂಪಿಯ ಸರಹದ್ದಿನಲ್ಲಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನೂ ಬಿಬಿಎಂಪಿಗೆ ಒಳಗೊಳ್ಳುವಂತೆ ಮಾಡುವುದಾಗಿದೆ ಎಂದು ಹೇಳಿದ್ದಾರೆ.

ಈಗ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಗಳನ್ನು ಕನಿಷ್ಟ 1 ಕಿ.ಮೀ ವರೆಗೂ ಸೇರಿಸಿಕೊಂಡು, ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರದ ಹೊರವಲಯದಲ್ಲಿರುವ ಕೆಲವು ಐಟಿ ಪಾರ್ಕ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತೆಗೆದುಕೊಂಡು ಅದರ ಆದಾಯ ಹೆಚ್ಚಿಸುವಂತೆ ಮಾಡುವುದಕ್ಕೂ ಈ ಮಸೂದೆ ಸಹಕಾರಿಯಾಗಿದೆ.

ಗೋಹತ್ಯೆ ನಿಷೇಧ ಮಸೂದೆಯನ್ನು ಅಜೆಂಡಾದಲ್ಲಿ ಸೇರಿಸದೇ ಬಿಜೆಪಿ ಅಂಗೀಕಾರ ಪಡೆದಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಲಾಪವನ್ನು ಬಹಿಷ್ಕರಿಸಿದ್ದರೆ, ಜೆಡಿಎಸ್ ಮಸೂದೆ ಅಂಗೀಕಾರದ ವೇಳೆ ಕಲಾಪದಿಂದ ಹೊರನಡೆಯಿತು.

ಮೇಯರ್ ಹಾಗೂ ಉಪ ಮೇಯರ್ ಅವರ ಅಧಿಕಾರಾವಧಿಯನ್ನು ಒಂದು ವರ್ಷದಿಂದ 2 ವರೆ ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂದೂ ಮಾಧುಸ್ವಾಮಿ ಮಸೂದೆ ಬಗ್ಗೆ ತಿಳಿಸಿದ್ದಾರೆ.

ಪ್ರತಿ ವಿಧಾನಸಭಾ ವ್ಯಾಪ್ತಿಗೂ ಈಗ 6-8 ವಾರ್ಡ್ ಗಳಿದ್ದು ಇನ್ನು ಮುಂದೆ 3-4 ವಾರ್ಡ್ ಗಳಷ್ಟೇ ಇದ್ದು, ಆಡಳಿತಕ್ಕೆ ಸುಲಭವಾಗಲಿದೆ. ಝೋನ್ ಗಳನ್ನು 8-15 ಕ್ಕೆ ಏರಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಬಿಬಿಎಂಪಿಯ ಹೊಸ ವ್ಯಾಪ್ತಿಗೆ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳನ್ನೂ ಸೇರಿಸಿಕೊಳ್ಳುವುದು ಮಸೂದೆಯ ಉದ್ದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com