
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಗೋಹತ್ಯೆ ನಿಷೇಧ ಕಾನೂನು ಲೆದರ್ ಮತ್ತು ಮಾಂಸ ಮಾರುಕಟ್ಟೆ ವಲಯಕ್ಕೆ ಹೊಸ ತಲೆನೋವು ತಂದಿದೆ.
ಹೊಸ ಕಾನೂನಿನ ಕುರಿತು ಸ್ವತಃ ಪಶುಸಂಗೋಪನಾ ಇಲಾಖೆ ಮತ್ತು ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕೆಲ ಅಂಶಗಳಿಗೆ ಸಂಬಂಧಿಸಿದಂತೆ ಚಕಾರವೆತ್ತಿವೆ. ಮಾಂಸ ಮಾರಾಟಗಾರರು ಮತ್ತು ಜನಾಸಾಮಾನ್ಯರಿಂದ ಬಂದ ಪ್ರತಿಕ್ರಿಯೆ ಮತ್ತು ಪ್ರಶ್ನೆಗಳ ಆಧಾರದ ಮೇಲೆ ಪಶುಸಂಗೋಪನಾ ಇಲಾಖೆ ಮತ್ತು ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಈ ಕೆಲ ಅಂಶಗಳ ಕುರಿತು ಸ್ಪಷ್ಟನೆ ಬಯಸಿವೆ.
ಪ್ರಸ್ತುತ ವಾರ್ಷಿಕ 500ರಿಂದ 700 ಕೋಟಿ ರೂ ಗಳಷ್ಟು ಆದಾಯ ತರುತ್ತಿರುವ ಚರ್ಮ ಮತ್ತು ಮಾಂಸ ವ್ಯಾಪಾರಕ್ಕೆ ಹೊಸ ಕಾನೂನಿ ಜಾರಿ ಬಳಿಕ ಯಾವೆಲ್ಲಾ ರೀತಿಯ ಬದಲಾವಣೆಗಳಾಗಲಿದೆ ಎಂದು ಉದ್ಯಮಿಗಳು ಚಿಂತಿತರಾಗಿದ್ದಾರೆ. ಪ್ರತೀ ಗಂಡು ಕರುಗಳ ನಿರ್ವಹಣೆಗೆ ನಿತ್ಯ 100 ರಿಂದ 150 ರೂ ಗಳಷ್ಟು ವೆಚ್ಚವಾಗುತ್ತಿದ್ದು. ಮಾಂಸಕ್ಕಾಗಿಯೇ ಗಂಡು ಕರುಗಳನ್ನು ಬೆಳೆಸುತ್ತಿರುವ ರೈತರ ಪರಿಸ್ಥಿತಿ ಏನು ಎಂದು ಹೆಸರು ಹೇಳಲು ಇಷ್ಟಪಡದ ಪಶುಸಂಗೋಪನಾ ಇಲಾಖೆಯ ಪಶುವೈದ್ಯರು ಹೇಳಿದ್ದಾರೆ.
ವಾರ್ಷಿಕ 2.5 ಲಕ್ಷ ದನಗಳನ್ನು ಮಾಂಸಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ 15-20 ಲಕ್ಷ ಕುರಿ ಮತ್ತು ಮೇಕೆಗಳನ್ನು ಮಾಂಸದ ಉದ್ಯಮದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಹೊಸ ಕಾನೂನಿನಲ್ಲಿ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ಇಲ್ಲ. ಇನ್ನು ಅತ್ತ ರಾಜ್ಯ ಸರ್ಕಾರ ಮಸೂದೆ ಅಂಗೀಕರಿಸುತ್ತಲೇ ಇತ್ತ ಮೊದಲ ದಿನವೇ ದನದ ಮಾಂಸದಲ್ಲಿ ಶೇ.40 ರಷ್ಟು ಬೇಡಿಕೆ ಕುಸಿತ ಕಂಡುಬಂದಿದೆ. ಮೊದಲ ದಿನವೇ ಹೀಗಾದರೆ ಭವಿಷ್ಯದ ದಿನಗಳ ಕುರಿತು ರೈತರು ಚಿಂತಿತರಾಗಿದ್ದಾರೆ ಎಂದು ಅಧಿಕಾರಿ ಹೇಳಿದರು.
ಇದೇ ವೇಳೆ ಕಾನೂನು ಜಾರಿಗೆ ತಂದಿರುವ ಸರ್ಕಾರ ಗೋಶಾಲೆಗಳನ್ನು ನಿರ್ಮಾಣ ಮಾಡಲು ಮಸೂದೆಯಲ್ಲಿ ಏಕೆ ಅವಕಾಶ ಕಲ್ಪಿಸಿಲ್ಲ. ರೈತರು ದನಕರುಗಳನ್ನು ನಿರ್ವಹಣೆ ಮಾಡಲಾಗದೇ ರಸ್ತೆಗಳಿಗೆ ಬಿಡುವ ಸಾಧ್ಯತೆ ಇದೆ. ಈ ಹೊಸ ಮಸೂದೆಯಿಂದ ರಸ್ತೆಗಳಿಗೆ ಬೀಳುವ ದನಕರುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ರೈತರು ಮತ್ತು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕರಡು ಓದಿದ ರೈತರು, ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಮೃಗಾಲಯದ ವ್ಯವಸ್ಥಾಪಕರು ಸರ್ಕಾರ ಮಸೂದೆಯ ಅಗತ್ಯತೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಇದು ಕೇವಲ 1964 ರ ಮಸೂದೆಯ ತಿದ್ದುಪಡಿಯಾಗಿದೆ. ಸರ್ಕಾರವು ಅದನ್ನು ದೂರ ಮಾಡಬಹುದಿತ್ತು. ಸರ್ಕಾರವು ಈಗ ಗಮನಹರಿಸಲೇ ಬೇಕಾದ ಅನೇಕ ಅಂಶಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement