ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವೃಷಭಾವತಿ ನದಿಗೆ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದ ಟ್ರಕ್ ವಶಕ್ಕೆ ಪಡೆದ ನಾಗರೀಕರು!

ವೃಷಭಾವತಿ ನದಿಗೆ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದಿದ್ದ ಟ್ರಕ್ ಚಾಲಕನನ್ನು ಸ್ಥಳೀಯರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.
Published on

ಬೆಂಗಳೂರು: ವೃಷಭಾವತಿ ನದಿಗೆ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದಿದ್ದ ಟ್ರಕ್ ಚಾಲಕನನ್ನು ಸ್ಥಳೀಯರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.

ಬನಶಂಕರಿಯ 6ನೇ ಹಂತದ 2ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದ್ದು, ವೃಷಭಾವತಿಗೆ ಮಧ್ಯರಾತ್ರಿಯಲ್ಲಿ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದಿದ್ದ ಟ್ರಕ್ ಅನ್ನು ಸ್ಥಳೀಯರು ಅಡ್ಡಗಟ್ಟಿ ತಮ್ಮ ವಶಕ್ಕೆ ಪಡೆದಿದ್ದಾರೆ. ಬನಶಂಕರಿಯ ನಿವಾಸಿಗಳು ಮತ್ತು ನಮಾಮಿ ವೃಷಭಾವತಿ ಸದಸ್ಯರು  ತಂಡಕಟ್ಟಿಕೊಂಡು, ಮುಂಜಾನೆ 3 ಗಂಟೆ ಸುಮಾರಿಗೆ ವಾಹನವನ್ನು ವಶಪಡಿಸಿಕೊಂಡರು. 

ಈ ಬಗ್ಗೆ ಸ್ಥಳೀಯ ನಿವಾಸಿ ಮತ್ತು ನಮಾಮಿ ವೃಷಭಾವತಿ ಸದಸ್ಯ ಸುರೇಶ್ ಆರ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು, ದುಷ್ಕರ್ಮಿಗಳು ಕೆಲವು ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ ಎಂದು ನಮಗೆ ಮಾಹಿತಿ ಬಂದಿತ್ತು. ಕಳೆದ ಹಲವು ತಿಂಗಳುಗಳಿಂದ ಈ ಕಸದಿಂದ  ಕೆಟ್ಟ ವಾಸನೆ ಬರುತ್ತಿತ್ತು. ಅದು ನೀರಿನ ಗುಣಮಟ್ಟವನ್ನೂ ಹಾಳು ಮಾಡುತ್ತಿತ್ತು. ಹೀಗಾಗಿ ಇಂದು ರಾತ್ರಿ ಉಪಾಯ ಮಾಡಿ ಕಸ ಸುರಿಯಲು ಬಂದ ವಾಹನವನ್ನು ಅಡ್ಡಗಟ್ಟಿದ್ದೇವೆ ಎಂದು ಹೇಳಿದ್ದಾರೆ.

ಸರ್ಕಾರದಿಂದ ನೇಮಕವಾದ ಭದ್ರತಾ ಸಿಬ್ಬಂದಿಗಳು (ಕೆಎಸ್‌ಪಿಸಿಬಿಯಿಂದ ನೇಮಿಸಲ್ಪಟ್ಟ ಕ್ಯಾಬ್ ಡ್ರೈವರ್, ಕೆಎಸ್‌ಪಿಸಿಬಿಯಿಂದ ಭದ್ರತಾ ಸಿಬ್ಬಂದಿ ಮತ್ತು ಸುರೇಶ್) ಸ್ಥಳೀಯರ ನೆರವಿನೊಂದಿಗೆ ಈ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಟ್ರಕ್ ವೊಂದು  ಅನುಮಾನಾಸ್ಪದವಾಗಿ ಚಲಿಸುತ್ತಿತ್ತು. ಕೂಡಲೇ ಅದನ್ನು ಹಿಂಬಾಲಿಸಿದ ಸಿಬ್ಬಂದಿ ಟ್ರಕ್ ಇದ್ದ ಸ್ಥಳಕ್ಕೆ ದೌಡಾಸಿದರು. ಟ್ರಕ್ ನ  ಹೆಡ್ ಲೈಟ್ ನ ನೆರವಿನಿಂದ ಅಲ್ಲಿಗೆ ಹೋಗಿ ಟ್ರಕ್ ಅನ್ನು ನಿಲ್ಲಿಸಿದರು. ಕೂಡಲೇ ಟ್ರಕ್ ನ ಕೀಯನ್ನು ವಶಕ್ಕೆ ಪಡೆದ ಸಿಬ್ಬಂದಿ, ಚಾಲಕನನ್ನು ವಿಚಾರಿಸಿದಾಗ ಆತ  ಟ್ರಕ್ ನಲ್ಲಿರುವ ತ್ಯಾಜ್ಯವನ್ನು ಸುರಿಯಲು ಬಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.  ಬಳಿಕ ಚಾಲಕ ತನ್ನ ಮಾಲೀಕ ಸಂತೋಷ್ ಎಂಬಾತನನ್ನು ಕರೆದಿದ್ದು, ಆತನ ಬಳಿ ವಿಚಾರಿಸಿದಾಗ ಆತ ಏರುದನಿಯಲ್ಲಿ ಮಾತನಾಡಿದ ಎಂದು ಸುರೇಶ್ ಹೇಳಿದ್ದಾರೆ.

ಕೂಡಲೇ ಸುರೇಶ್ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ಹೊಯ್ಸಳ ಸಿಬ್ಬಂದಿ ಸ್ಥಳಕ್ಕಾಗಮಿಸುತ್ತಿದ್ದಂತೆಯೇ ಎಲ್ಲರೂ ಓಡಿ ಹೋದರು. ಆದರೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಎಫ್ ಐಆರ್ ಕೂಡ ದಾಖಲಿಸಲಾಗಿದೆ ಎಂದು ಸುರೇಶ್ ಹೇಳಿದ್ದಾರೆ. 

ಇದೇ ವೇಳೆ  ಕೆಎಸ್‌ಪಿಸಿಬಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಅಧಿಕಾರಿಗಳ ಕುಮ್ಮಕ್ಕಿಲ್ಲದೆ ಇಲ್ಲಿ ಕಾನೂನು ಬಾಹಿರವಾಗಿ ತ್ಯಾಜ್ಯ ಸುರಿಯಲು ಸಾಧ್ಯವಿಲ್ಲ. ಈ ಕಳ್ಳಾಟದಲ್ಲಿ ಅಧಿಕಾರಿಗಳೂ ಕೂಡ ಕೈ ಜೋಡಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com