ಚಲಿಸುತ್ತಿದ್ದ ಗೂಡ್ಸ್ ವಾಹನ ನಡು ರಸ್ತೆಯಲ್ಲೇ ಬೆಂಕಿಗಾಹುತಿ; ಚಾಲಕ ಪಾರು

ಚಲಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿದ ಪರಿಣಾಮ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿ ಲಿಂಕ್ ರಸ್ತೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಲಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿದ ಪರಿಣಾಮ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿ ಲಿಂಕ್ ರಸ್ತೆಯಲ್ಲಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿ ನೋಡಿದ ಚಾಲಕ ವಾಹನದಿಂದ ಕೆಳಗಿಳಿದು ದೂರ ಓಡಿ‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಅತ್ತಿಬೆಲೆ ವಾಸಿಯೊಬ್ಬರು ಮನೆ ಖಾಲಿ ಮಾಡಿ ಜಿಗಣಿಯಲ್ಲಿನ ಮನೆಗೆ ಹೋಗಲು ಮನೆಯ ಸರಕು ಸಾಮಾಗ್ರಿಗಳನ್ನು ಗೂಡ್ಸ್ ವಾಹನದಲ್ಲಿ ತುಂಬಿ ಕಳುಹಿಸಿದ್ದರು. ವಾಹನವು ಅತ್ತಿಬೆಲೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಜಿಗಣಿ ಕಡೆ ಬರುತ್ತಿದ್ದ ವೇಳೆ ಬೊಮ್ಮಸಂದ್ರ ಮತ್ತು ಜಿಗಣಿ ಲಿಂಕ್ ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆಯೇ ಬೆಂಕಿ ಹೊತ್ತಿಕೊಂಡಿದೆ.

ಹೊಗೆ ಮತ್ತು ಬೆಂಕಿಯನ್ನು ಗಮನಿಸಿದ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೊದಲು ವಾಹನದಲ್ಲಿದ್ದ ಸಿಲಿಂಡರ್ ಹೊರ ತೆಗೆದಿದ್ದಾನೆ. ಜೊತೆಗೆ ಕೆಲ ಸರಕು ಸರಂಜಾಮುಗಳನ್ನು ಹೊರ ತೆಗೆಯಲು ಯತ್ನಿಸಿದ್ದಾನೆ. ಆದರೆ, ಜನರು ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ವಾಹನವನ್ನು ಆವರಿಸಿದೆ.

ಸ್ಥಳೀಯರು ನೀರಿನ ಟ್ಯಾಂಕರ್ ನೆರವಿನಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಆದರೆ, ಆ ವೇಳೆಗಾಗಲೇ ಬೆಂಕಿಯ ಕೆನ್ನಾಲಿಗೆಯಿಂದ ಇಡೀ ಗೂಡ್ಸ್ ವಾಹನ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com