

ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಕ್ಕೆ ಅಬಕಾರಿ ಸಚಿವರೂ ಆಗಿರುವ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸ್ಪಷ್ಟನೆ ನೀಡಿದ್ದು, ತಾವು ಭ್ರಷ್ಟಾಚಾರಿ ಅಲ್ಲ. ಯಾವುದೇ ಲಂಚ ತೆಗದುಕೊಂಡಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಎಲ್ಲಿ ಬೇಕಾದರೂ ಬಂದು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ತಮಗೆ ಯಾರೂ ಸಹ ಬಲಗೈ ಬಂಟ ಇಲ್ಲ. ಮಂಜುನಾಥ್ ಹಾಗೂ ಹರ್ಷ ಯಾರೂ ಎಂಬುದು ಗೊತ್ತಿಲ್ಲ. ಮಂಜುನಾಥ್ ಹಾಗೂ ಹರ್ಷ ಕೋಲಾರದ ವಾಸಿಗಳಷ್ಟೆ. ಅವರ ಬಗ್ಗೆ ತಮಗೆ ಮಾಹಿತಿಯಿಲ್ಲ. ಅಬಕಾರಿ ಇಲಾಖೆಯಲ್ಲಿ ಮೋಹನ್ ಕುಮಾರ್ ಭ್ರಷ್ಟಾಚಾರಿಯಾಗಿದ್ದು, ಮೋಹನ್ ಕುಮಾರ್ ಪುತ್ರಿ ಸ್ನೇಹ ಇದೆಲ್ಲಾ ಮಾಡುತ್ತಿದ್ದಾರೆ. ಅಧಿಕಾರಿ ಮೋಹನ್ ಕುಮಾರ್ ಮಾನಸಿಕ ಅಸ್ವಸ್ಥರಿದ್ದಾರೆ. ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದು, ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳುತ್ತಿದ್ದು, ಈಗಾಗಲೇ ಇಲಾಖೆ ತನಿಖೆಗೆ ಆದೇಶ ಮಾಡಿದ್ದೇನೆ ಎಂದರು.
ಎಸ್ಸಿ ಸಮುದಾಯದಿಂದ ಬಂದವನಾಗಿದ್ದರಿಂದ ತಮ್ಮ ಮೇಲೆ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ. ತಮ್ಮನ್ನು ಹೆದರಿಸಲು ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ವರ್ಗಾವಣೆ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಮೋಹನ್ ಕುಮಾರ್ ಭ್ರಷ್ಟಾಚಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಷ್ರಡಂತ್ಯ ಮಾಡಲಾಗುತ್ತಿದೆ ಎಂದು ನಾಗೇಶ್ ದೂರಿದರು.
ಹೊಸ ವರ್ಷಾಚರಣೆಗೆ ಬಿಗಿ ಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿದ ನಾಗೇಶ್, ನಮಗೆ ಗುರಿಗಿಂತ ಆರೋಗ್ಯ ಮುಖ್ಯ. ವಿದೇಶದಿಂದ ಬಂದವರನ್ನು ಕ್ವಾರೆಂಟನ್ ಮಾಡಲಾಗುತ್ತಿದೆ. ಕ್ರಿಸ್ಮಸ್ ಪಾರ್ಟಿಗಳು, ಹೊಸ ವರ್ಷ ಯಾವ ರೀತಿ ನಡೆಯಬೇಕು ಎಂದು ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಈಗಾಗಲೇ ಪಾರ್ಟಿ ,ಹೋಟೆಲ್, ಪಬ್ ಗೆ ಈಗಾಗಲೇ ನಿರ್ಬಂಧ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅಬಕಾರಿ ಅಧಿಕಾರಿಯೊಬ್ಬರ ವರ್ಗಾವಣೆಗೆ ಒಂದು ಕೋಟಿ ರುಪಾಯಿ ಲಂಚಕ್ಕೆ ಒತ್ತಾಯಿಸಿರುವ ಬಗ್ಗೆ ಸಚಿವ ಎಚ್.ನಾಗೇಶ ಅವರ ವಿರುದ್ಧ ಸಲ್ಲಿಕೆಯಾಗಿರುವ ದೂರು ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿಯ ಪುತ್ರಿಯೊಬ್ಬರು ಪ್ರಧಾನಮಂತ್ರಿ ಕಚೇರಿಗೆ ಸಲ್ಲಿಸಿರುವ ಈ ದೂರು, ರಾಜ್ಯದ ಇ-ಜನಸ್ಪಂದನ ವಿಭಾಗದಲ್ಲಿಯೂ ಅಧಿಕೃತವಾಗಿ ದಾಖಲಾಗಿದ್ದರೂ ಪರಿಹಾರ ಸಿಕ್ಕಿರುವ ಬಗ್ಗೆ ಮಾಹಿತಿಯಿಲ್ಲ.