ಸೇಫ್ ಸಿಟಿ ಯೋಜನೆ: ನಿಂಬಾಳ್ಕರ್, ರೂಪಾ ಜಟಾಪಟಿ ಮತ್ತಷ್ಟು ಜೋರು!

ಬೆಂಗಳೂರಿನ ಸುರಕ್ಷತೆ ಸಲುವಾಗಿ ಸಿಸಿಟಿವಿ ಅಳವಡಿಸುವ ರೂ.619 ಕೋಟಿ ಮೊತ್ತದ ಗುತ್ತಿಗೆ ವಿಚಾರದಲ್ಲಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ನಡುವಿನ ಜಟಾಪಟಿ ಮತ್ತಷ್ಟು ಜೋರಾಗತೊಡಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಸುರಕ್ಷತೆ ಸಲುವಾಗಿ ಸಿಸಿಟಿವಿ ಅಳವಡಿಸುವ ರೂ.619 ಕೋಟಿ ಮೊತ್ತದ ಗುತ್ತಿಗೆ ವಿಚಾರದಲ್ಲಿ ಒಂದು ಕಂಪನಿಯ ಪರವಾಗಿ ಆ ಯೋಜನೆಯ ಟೆಂಡರ್ ವಿಚಾರವಾಗಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ನಡುವಿನ ಜಟಾಪಟಿ ಮತ್ತಷ್ಟು ಜೋರಾಗತೊಡಗಿದೆ. 

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಯೋಜನೆಯ ಟೆಂಡರ್ ಆಹ್ವಾನ ಸಮಿತಿ ಅಧ್ಯಕ್ಷರಾಗಿರುವ ಬೆಂಗಳೂರಿನ ಹೆಚ್ಚಿವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು, ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ನಿರ್ಭಯಾ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಬಿಇಎಲ್ ಕಂಪನಿಯನ್ನು ಅನರ್ಹಗೊಳಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಹೇಳಿದ್ದಾರೆ.

ಇ ಟೆಂಡರ್ ನಲ್ಲಿ ಬಿಇಎಲ್ ಕಂಪನಿಯನ್ನು ಅನರ್ಹಗೊಳಿಸಲಾಗಿತ್ತು ಎಂಬುದು ಸುಳ್ಳು. ವಾಸ್ತವವಾಗಿ ಯೋಜನೆಗೆ ಸಂಬಂಧಿಸಿದಂತೆ ಇದೂವರೆಗೂ ಮೂರು ಟೆಂಡರ್ ಕರೆಯಲಾಗಿದೆ. 

ಮೊದಲನೇ ಟೆಂಡರ್ ನಲ್ಲಿ ಬಿಇಎಲ್ ಪಾಲ್ಗೊಂಡಿಲ್ಲ. ಭಾಗಿಯಾಗಿದ್ದ ಮೂರು ಕಂಪನಿಗಳಿಗೆ ಅರ್ಹತಾ ಪೂರ್ವ ಹಂತ ಮತ್ತು ತಾಂತ್ರಿಕ ಅರ್ಹತಾ ಹಂತ ಇರುತ್ತದೆ. ಮೊದಲನೇ ಹಂತದಲ್ಲಿ ಯಾರೂ ಅರ್ಹತೆ ಪಡೆಯಲಿಲ್ಲ. ತಾಂತ್ರಿಕ ಅರ್ಹತಾ ಪರಿಶೀಲನೆ ನಡೆಯುವ ಮೊದಲೇ ಮೂರು ಕಂಪನಿಗಳು ಟೆಂಡರ್ ನಿಂದ ಹೊರ ಬಿದ್ದವು. ಹೀಗಾಗಿ ಬಿಇಎಲ್'ನ್ನು ಟೆಂಡರ್ ನಿಂದ ಅನರ್ಹಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. 

ಜೂನ್.20ರಂದು ಎರಡೇ ಬಾರಿಗೆ ಟೆಂಡರ್ ಕರೆಯಲಾಗಿತ್ತು. ಆಗ ಬಿಇಎಲ್, ಎಲ್ ಆ್ಯಂಡ್ ಟಿ, ಮ್ಯಾಟ್ರಿಕ್ಸ್ ಸೆಕ್ಯೂರಿಟಿ ಮತ್ತು ಸರ್ವೈಲೆನ್ಸ್ ಪ್ರೈವೆಟ್ ಲಿ.ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಪ್ರಕಾರ ಚೀನಾ ಉಪಕರಣಗಳನ್ನು ಬಳಸಬಾರದು ಎಂದು ಸೂಚಿಸಲಾಗಿತ್ತು ಹೀಗಾಗಿ 2ನೇ ಟೆಂಡರ್ ಕೂಡ ರದ್ದಾಯಿತು. 

ನ.11ರಂದು 3ನೇ ಟೆಂಡರ್ ಕರೆಯಲಾಗಿದ್ದು, ಬಿಡ್ ಸಲ್ಲಿಕೆಗೆ ಜ.8ರವರೆಗೂ ಕಾಲಾವಕಾಶವಿದೆ. ಟೆಂಡರ್ ಸಮಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಿಬಿಎಂಪಿ, ಇ-ಆಡಳಿತದ ಅಧಿಕಾರಿಗಳು ಇರುತ್ತಾರೆ. ಟೆಂಡರ್ ನ ಪೂರ್ವ ಅರ್ಹತೆ ಮತ್ತು ತಾಂತ್ರಿಕ ಅರ್ಹತಾ ಸುತ್ತಿನ ಬಳಿಕ ಬೆಂಗಳೂರು ನಗರದ ಸುರಕ್ಷತೆ ಕುರಿತು 48 ಗಂಟೆಗಳ ಕಾಲ ನೇರ ಪ್ರಾತ್ಯಕ್ಷಿಕೆಯನ್ನು ಕಂಪನಿಗಳು ನೀಡಬೇಕು. ನಂತರ ಹಣಕಾಸು ಟೆಂಡರ್ ಕರೆಯಲಾಗುತ್ತದೆ. ಆದರೆ, ಈ ಮೂರು ಕಂಪನಿಗಳ ಬಗ್ಗೆ ಟೆಂಡರ್ ಪಡೆಯಲು ಅರ್ಹತೆ ಹೊಂದಿಲ್ಲ ಎಂಬ ಬಗ್ಗೆಯಾಗಲಿ, ನಿರ್ದಿಷ್ಟ ಒಂದು ಕಂಪನಿಗೆ ಮಾತ್ರ ಟೆಂಡರ್ ನೀಡಲು ಪ್ರೋತ್ಸಾಹಿಸಲಾಗುತ್ತದೆ ಎಂಬ ಯಾವುದೇ ಆಪಾದನೆ ಇದೂವರೆಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ವಿವರಿಸಿದ್ದಾರೆ. 

ಇನ್ನು ಟೆಂಡರ್ ನಲ್ಲಿ ಭಾಗಿಯಾಗಿದ್ದ ಕಂಪನಿಯ ಪ್ರತಿನಿಧಿಗೆ ಗೃಹ ಇಲಾಖೆಯಿಂದ ಕರೆ ಮಾಡಿ ಮಾಹಿತಿ ಕೇಳಿರುವ ಬಗ್ಗೆ ಡಿ.7ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಪತ್ರ ಸೋರಿಕೆಯಾದ ಬಳಿಕ ಊಹಾಪೋಹದ ಸುದ್ದಿಗಳು ಕೇಳಿ ಬರುತ್ತಿವೆ. ಈ ವಿಚಾರ ತನಿಖಾ ಹಂತದಲ್ಲಿ ಇರುವಾಗ ಹೆಚ್ಚು ಮಾತನಾಡುವುದಿಲ್ಲ. ಅಲ್ಲದೆ ನನ್ನ ಬಗ್ಗೆ ಇರುವ ವೈಯಕ್ತಿಕ ಆಪಾದನೆಗಳ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಪ್ರತಿಕ್ರಿಸುವುದಿಲ್ಲ ಎಂದು ತಿಳಿಸಿದ್ದಾರೆ. 

ಇ-ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕ ಹಾಗೂ ಪಕ್ಷಾತೀತವಾಗಿ ನಡೆಯುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳವಂತಾಗಿದೆ ಎಂದು ತಿರುಗೇಟು ನೀಡಿದ್ದಾರೆ. 

ಸಮಾರಂಭವೊಂದರಲ್ಲಿ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಹಾಡಿರುವ ಟಿಕ್ ಟಿಕ್ ಹಾಡಿನ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸೇಫ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಊಹಾಪೋಹಗಳು ಅಸಮಂಜಸ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವಂತಾಗಿದೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿದೆ. ವೈಯಕ್ತಿಕ ದ್ವೇಷಗಳಿಗೆ ನಾನು ಉತ್ತರ ಕೊಡುವುದು ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ಟೆಂಡರ್ ಬಗ್ಗೆ ಕೇಳಿ ಬರುತ್ತಿರುವ ಆರೋಪಕ್ಕಷ್ಟೇ ಸ್ಪಷ್ಟೀಕರಣ ನೀಡುತ್ತಿದ್ದೇನೆಂದು ಹೇಳಿದ್ದಾರೆ. 

ನಾನು ಬರೆದ ಪತ್ರ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬೇರೆಯವರು ಅಧಿಕಾರ ವ್ಯಾಪ್ತಿ ಮೀರುತ್ತಿದ್ದಾರೆ ಎಂದರೆ ನಾನು ಮೀರುವುದಿಲ್ಲ ಎಂದು ತಿಳಿಸಿದ್ದಾರೆ. 

ಹೇಮಂತ್​ ನಿಂಬಾಳ್ಕರ್​​ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ; ರೂಪಾ ಗಂಭೀರ ಆರೋಪ
ಈ ನಡುವೆ ಸುದ್ದಿಗೋಷ್ಠಿಯಲ್ಲಿ ನಿಂಬಾಳ್ಕರ್ ಪ್ರಸ್ತಾಪಿಸಿರುವ ವಿಚಾರಗಳನ್ನು ರೂಪಾ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಅಲ್ಲದೆ, ಹೇಮಂತ್​ ನಿಂಬಾಳ್ಕರ್​​ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ ಎಂದು ಗೃಹ ಕಾರ್ಯದರ್ಶಿ ಡಿ.ರೂಪಾ ಆರೋಪಿಸಿದ್ದಾರೆ.

2 ಬಾರಿ ಟೆಂಡರ್ ರದ್ದತಿಗೆ ಕಾರಣವಾದ ದೂರಿಗೆ ನಿಂಬಾಳ್ಕರ್ ಉತ್ತರಿಸಿಲ್ಲ. ಬೃಹತ್​ ಮೊತ್ತದ ಟೆಂಡರ್​ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಟೆಂಡರ್​ ಪ್ರಕ್ರಿಯೆಯಲ್ಲಿಯೇ ಸಾಕಷ್ಟು ಅಕ್ರಮಗಳು ನಡೆದಿದೆ. ಸರ್ಕಾರಕ್ಕೆ ಈ ಬಗ್ಗೆ ತಪ್ಪು ಮಾಹಿತಿ ಸಲ್ಲಿಕೆಯಾಗಿದೆ. ಹೇಮಂತ್​ ನಿಂಬಾಳ್ಕರ್​​ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೂ.4500 ಕೋಟಿ ಐಎಂಎ ಕಂಪನಿ ಹಗರಣದಲ್ಲಿ ಹೇಮಂತ್ ನಿಂಬಾಳ್ಕರ್ ಮೇಲೆ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ರೂಪಾ ನೆನಪಿಸಿಕೊಂಡಿದ್ದಾರೆ.  ನಿರ್ಭಯಾ ಸೇಫ್​ ಸಿಟಿ ಯೋಜನೆಯ ಇಡೀ ಪ್ರಕ್ರಿಯೆಯಲ್ಲಿ ಹೇಮಂತ್​ ನಿಂಬಾಳ್ಕರ್​​ ವಹಿಸಿದ ಪಾತ್ರದ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com