ಬೆಂಗಳೂರು: ಕುಖ್ಯಾತ ಇರಾನಿ ಗ್ಯಾಂಗ್ ನ ಮೂವರ ಬಂಧನ, 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಸರ ಅಪಹರಣದ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿರುವ ಪಶ್ಚಿಮ ವಿಭಾಗದ ಮಾಗಡಿ ರಸ್ತೆ ಪೊಲೀಸರು, ಕುಖ್ಯಾತ ಇರಾನಿ ಗ್ಯಾಂಗ್ ನ ಮೂವರು ಸರಗಳ್ಳರನ್ನು ಬಂಧಿಸಿದ್ದು, 27 ಪ್ರಕರಣಗಳನ್ನು ಭೇದಿಸಿ 50 ಲಕ್ಷ ರೂ. ಮೌಲ್ಯದ 1.20 ಕೆ.ಜಿ.ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸರ ಅಪಹರಣದ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿರುವ ಪಶ್ಚಿಮ ವಿಭಾಗದ ಮಾಗಡಿ ರಸ್ತೆ ಪೊಲೀಸರು, ಕುಖ್ಯಾತ ಇರಾನಿ ಗ್ಯಾಂಗ್ ನ ಮೂವರು ಸರಗಳ್ಳರನ್ನು ಬಂಧಿಸಿದ್ದು, 27 ಪ್ರಕರಣಗಳನ್ನು ಭೇದಿಸಿ 50 ಲಕ್ಷ ರೂ. ಮೌಲ್ಯದ 1.20 ಕೆ.ಜಿ.ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಇರಾನಿ ಗ್ಯಾಂಗ್ ನ ವೃತ್ತಿಪರ ಆರೋಪಿಗಳಾದ ಸಲೀಂ ಇರಾನಿ, ಆಜಾದ್ ಇರಾನಿ ಮತ್ತು ಅವ್ನೋ ಇರಾನಿ ಬಂಧಿತ ಆರೋಪಿಗಳು.

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಸರ ಅಪಹರಣ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದುದನ್ನು ಗಮನಿಸಿದ ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ. ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಈ ತಂಡ ಕಾರ್ಯಾಚರಣೆ ನಡೆಸಿ, ಆರೋಪಿ ಸಲೀಂ ಇರಾನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈತ ನೀಡಿದ ಮಾಹಿತಿ ಆಧಾರದಲ್ಲಿ ಇತರ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಬೆಂಗಳೂರು ನಗರ ಮತ್ತು ಧಾರವಾಡ ನಗರಗಳಲ್ಲಿ ಒಂಟಿ ಮಹಿಳೆಯರನ್ನು ಗುರುತಿಸಿಕೊಂಡು ಸರ ಅಪಹರಣ ಮಾಡುತ್ತಿದ್ದರು. ಡಿಸೆಂಬರ್ 11ರಂದು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ 18 ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು 27 ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 50 ಲಕ್ಷ ರೂ. ಬೆಲೆಬಾಳುವ 1 ಕೆಜಿ 20 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಗಡಿ ರಸ್ತೆಯ 2, ಬ್ಯಾಡರಹಳ್ಳಿಯ 3, ಚಂದ್ರಾಲೇಔಟ್ ನ 2, ವಿಜಯನಗರ, ರಾಮಮೂರ್ತಿನಗರದ ತಲಾ 3, ಜ್ಞಾನಭಾರತಿ, ಕಾಟನ್ ಪೇಟೆ, ಯಲಹಂಕ, ಹೆಣ್ಣೂರು, ಸುಬ್ರಹ್ಮಣ್ಯನಗರ, ಬಾಣಸವಾಡಿ, ಕೊಡಿಗೇಹಳ್ಳಿ, ಬೆಳ್ಳಂದೂರು, ಬಾಗಲೂರು, ಬನಶಂಕರಿ, ವಿದ್ಯಾರಣ್ಯಪುರ, ಜೀವನ ಭೀಮಾನಗರದ ತಲಾ ಒಂದು, ಧಾರವಾಡದ ವಿದ್ಯಾಗಿರಿಯ 2 ಪ್ರಕರಣಗಳು ಸೇರಿ ಒಟ್ಟು 27 ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಗಳು ಬೆಂಗಳೂರು ನಗರಕ್ಕೆ ಬಂದು ಸರ ಅಪಹರಣ ಮಾಡಿಕೊಂಡು ಧಾರವಾಡಕ್ಕೆ ಹೋಗುತ್ತಿದ್ದರು. ಎರಡನೇ ಆರೋಪಿ ಅವ್ನೂ ಇರಾನಿ ತನ್ನ ತಾಯಿ ಬಾನು ಇರಾನಿ ಹಾಗೂ ಆ ಪ್ರದೇಶದ ನಿವಾಸಿ ಫಾತೀಮಾ ಮತ್ತು ಗುಲ್ಜಾರ್ ಬೇಗಂ ಅವರ ಕಡೆಯಿಂದ ಚಿನ್ನದ ಸರಗಳನ್ನು ವಿಲೇವಾರಿ ಮಾಡಿಸುತ್ತಿದ್ದರು.

ಒಂದನೇ ಆರೋಪಿ ಸಲೀಂ ಇರಾನಿ ವಿರುದ್ಧ ಆಂಧ್ರಪ್ರದೇಶದ ಗುಂಟೂರು, ಧಾರವಾಡ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಈತ ನ್ಯಾಯಾಂಗ ಬಂಧನದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com