

ಬೆಂಗಳೂರು: ಕೇವಲ 8 ನಿಮಿಷದಲ್ಲೇ ಇಡೀ ರೈಲನ್ನು ಸ್ವಚ್ಛಗೊಳಿಸುವ ಕರ್ನಾಟಕದ ಮೊಟ್ಟ ಮೊದಲ ಸ್ವಯಂಚಾಲಿತ ರೈಲ್ವೆ ಕೋಚ್ ಸ್ವಚ್ಛಗೊಳಿಸುವ ಘಟಕ ಆರಂಭಗೊಂಡಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಈ ಘಟಕವನ್ನು ಸ್ಥಾಪನೆ ಮಾಡಲಾಗಿದ್ದು, ಕೆಎಸ್‌ಆರ್ ರೈಲು ನಿಲ್ದಾಣದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಯ ಮಾರ್ಗದ ಬದಿಯಲ್ಲಿ ಈ ಘಟಕ ಆರಂಭಗೊಂಡಿದೆ ಎಂದು ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಎಕೆ ಸಿಂಗ್ ಅವರು ತಿಳಿಸಿದ್ದಾರೆ.
ರೈಲ್ವೆ ಕೋಚ್ ಸ್ವಚ್ಛಗೊಳಿಸುವ ಘಟಕ ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಈ ಪ್ಲಾಂಟ್ ಕೋಚ್ ಸ್ವಚ್ಛಗೊಳಿಸುವ ಇಡೀ ಪ್ರಕ್ರಿಯೆಯನ್ನು ಸರಳೀಕರಿಸಿದೆ. ಅತ್ಯಂತ ಕಡಿಮೆ ನೀರು, ಕಡಿಮೆ ಸಮಯ ಮತ್ತು ಕಡಿಮೆ ಶ್ರಮದೊಂದಿಗೆ ಇಡೀ ರೈಲು ಸ್ವಚ್ಛಗೊಳಿಸಬಹುದಾಗಿದೆ ಎಂದು ಎಕೆ ಸಿಂಗ್ ಹೇಳಿದ್ದಾರೆ.
ಈ ಘಟಕದ ವಿಶೇಷವೆಂದರೆ, 24 ಬೋಗಿಗಳ ಒಂದು ರೈಲು ಗಾಡಿ ತೊಳೆಯಲು 8 ನಿಮಿಷ ಸಾಕಾಗಲಿದೆ. ಸಿಬ್ಬಂದಿಯ ಸಹಾಯದಿಂದ ರೈಲು ತೊಳೆಯಲು ಈಗ ಬಳಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ 50ರಿಂದ ಶೇ60ರಷ್ಟು ಉಳಿತಾಯವಾಗಲಿದೆ. ಒಂದು ಬೋಗಿ ತೊಳೆಯಲು ಈ ಹಿಂದೆ ಸುಮಾರು 1,500 ಲೀಟರ್ ನೀರಿನ ಅಗತ್ಯ ಇತ್ತು. ಹೊಸ ವ್ಯವಸ್ಥೆಯಲ್ಲಿ 300 ಲೀಟರ್ ನೀರು ಸಾಕಾಗಲಿದೆ. ಅಲ್ಲದೆ ಇಲ್ಲಿ ಶೇ.85ರಷ್ಟು ನೀರನ್ನು ಮರುಬಳಕೆ ಮಾಡುವ ಸೌಲಭ್ಯ ಕೂಡ ಇದೆ. ಸ್ವಯಂಚಾಲಿತ ಬೋಗಿ ತೊಳೆಯುವ ಘಟಕದೊಳಗೆ ರೈಲು ನಿಧಾನವಾಗಿ ಚಲಿಸುವಾಗಲೇ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಯಂತ್ರಗಳು ಸ್ವಚ್ಛಗೊಳಿಸುತ್ತವೆ. ಇಡೀ ಘಟಕವನ್ನು ಕೇವಲ ಒಬ್ಬ ಸಿಬ್ಬಂದಿಯೇ ನಿರ್ವಹಿಸಬಹುದು. ಈ ಹಿಂದಿನ ಸಾಂಪ್ರದಾಯಿಕ ವಿಧಾನದಲ್ಲಿ ಒಂದು ರೈಲು ಸ್ವಚ್ಛಗೊಳಿಸಲು ಕನಿಷ್ಠ 30 ನಿಮಿಷ ಬೇಕಾಗುತ್ತಿತ್ತು. ಆದರೆ ಕೇವಲ ನಿಮಿಷದಲ್ಲಿ ಇಡೀ ರೈಲು ಸ್ವಚ್ಛಗೊಳಿಸಬಹುದಾಗಿದೆ. ಇದರಿಂದ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯತೆಗೂ ಕಡಿವಾಣ ಬೀಳಲಿದೆ ಎಂದು ಏಕೆ ಸಿಂಗ್ ಹೇಳಿದ್ದಾರೆ.
ಅಂತೆಯೇ ಇದೇ ರೀತಿಯ ಪ್ಲಾಂಟ್ ಗಳನ್ನು 2020ರ ಅಂತ್ಯದ ವೇಳೆಗೆ ನಗರದ ಯಶವಂತಪುರ ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳಲ್ಲೂ ತೆರೆಯಲು ಚಿಂತಿಸಲಾಗಿದೆ ಎಂದು ಹೇಳಿದ ಎಕೆ ಸಿಂಗ್ ಅವರು, ಈ ಘಟಕ ನಿರ್ಮಾಣಕ್ಕೆ ಸುಮಾರು 1.78 ಕೋಟಿ ರೂ ವೆಚ್ಚವಾಗಿದೆ. ವಡೋದರಾ ಮೂಲದ ಒರಿಯಂಟಲ್ ಕ್ಟರರ್ಸ್ ಸಂಸ್ಥೆ ಈ ಘಟಕವನ್ನು ನಿರ್ಮಾಣ ಮಾಡಿದೆ ಎಂದು ಹೇಳಿದರು. ಇನ್ನು ಇದೇ ವಿಚಾರವನ್ನು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.